ಬದರಿನಾಥ ದೇಗುಲದ ಬಾಗಿಲು ಮುಚ್ಚುವಾಗ ಅರ್ಚಕರೇ ಮಹಿಳೆಯ ವೇಷ ಧರಿಸುವುದೇಕೆ? ಅಚ್ಚರಿ ವಿಷಯ ಏನದು?

ಉತ್ತರಾಖಂಡದ ಪವಿತ್ರ ಚಾರ್ ಧಾಮ್ ಯಾತ್ರೆಯು ಹಿಂದೂಗಳಿಗೆ ಅತ್ಯಂತ ಶ್ರದ್ಧಾಭಕ್ತಿಯ ಕೇಂದ್ರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಇವುಗಳಲ್ಲಿ ಶ್ರೀಮನ್ನಾರಾಯಣನಿಗೆ ಸಮರ್ಪಿತವಾದ ಬದರಿನಾಥ ಧಾಮ ಪ್ರಮುಖವಾದುದು. ಚಳಿಗಾಲದಲ್ಲಿ ವಿಪರೀತ ಹಿಮಪಾತ ಮತ್ತು ಕೊರೆಯುವ ಚಳಿಯ ಕಾರಣದಿಂದ ಈ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಗುತ್ತದೆ.

ಅದರಂತೆ, ನವೆಂಬರ್ 16ರಂದು ರಾತ್ರಿ 9:37ಕ್ಕೆ ಬದರಿನಾಥ ದೇವಾಲಯದ ದ್ವಾರಗಳನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗಿದೆ. ಮುಂದಿನ ಆರು ತಿಂಗಳ ಕಾಲ ಜೋಶಿಮಠದಲ್ಲಿರುವ ನರಸಿಂಹ ದೇವಾಲಯದಲ್ಲಿ ಭಗವಂತನಿಗೆ ನಿತ್ಯ ಪೂಜೆಗಳು ನೆರವೇರಲಿವೆ. ಆದರೆ, ಬದರಿನಾಥ ದೇಗುಲದ ಬಾಗಿಲು ಮುಚ್ಚುವ ಸಂದರ್ಭದಲ್ಲಿ ನಡೆಯುವ ಒಂದು ವಿಶೇಷ ಸಂಪ್ರದಾಯ ಭಕ್ತರ ಗಮನ ಸೆಳೆಯುತ್ತದೆ. ಅದುವೇ ದೇವಾಲಯದ ಮುಖ್ಯ ಅರ್ಚಕರು ಮಹಿಳೆಯ ವೇಷ ಧರಿಸುವ ಆಚರಣೆ.

ಇದನ್ನೂ ಓದಿ: ಚಿನ್ನದ ಬೆಲೆ ₹1 ಲಕ್ಷಕ್ಕೆ ಇಳಿಕೆಯಾಗುತ್ತಾ? ತಜ್ಞರು ಹೇಳುವುದೇನು?

ಬಾಗಿಲು ಮುಚ್ಚುವ ಮುನ್ನ ನಡೆಯುವ ಪಂಚ ಪೂಜೆಗಳು

ಬದರಿನಾಥ ದೇಗುಲದ ಬಾಗಿಲು ಮುಚ್ಚುವ ಐದು ದಿನಗಳ ಮೊದಲೇ ವಿಶೇಷ ಧಾರ್ಮಿಕ ವಿಧಿವಿಧಾನಗಳು ಆರಂಭವಾಗುತ್ತವೆ. ಇವುಗಳನ್ನು ‘ಪಂಚ ಪೂಜೆಗಳು’ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ದೇವಾಲಯದ ದೈನಂದಿನ ಪೂಜಾ ಪದ್ಧತಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತದೆ. ಚಳಿಗಾಲದಲ್ಲಿ ಭಗವಂತನ ಪೂಜೆಗೆ ಅಗತ್ಯವಾದ ಸಿದ್ಧತೆಗಳನ್ನೂ ಕೈಗೊಳ್ಳಲಾಗುತ್ತದೆ.

ಈ ಪಂಚ ಪೂಜೆಗಳಲ್ಲಿ ಅತ್ಯಂತ ವಿಶೇಷವಾದದ್ದು ಲಕ್ಷ್ಮಿ ದೇವಿಯ ವಿಗ್ರಹವನ್ನು ಬದರಿ ವಿಶಾಲ ಸ್ವಾಮಿಯ ಗರ್ಭಗುಡಿಗೆ ಸ್ಥಳಾಂತರಿಸುವ ಸಂಪ್ರದಾಯ. ಈ ಸಂದರ್ಭದಲ್ಲಿ ದೇವಾಲಯದ ಮುಖ್ಯ ಅರ್ಚಕರಾದ ರಾವಲ್ ಜಿ ಅವರು ಮಹಿಳೆಯ ವೇಷಭೂಷಣ ಧರಿಸುತ್ತಾರೆ.

ಬದರಿನಾಥ ದೇವಾಲಯದಲ್ಲಿ ರಾವಲ್ ಎಂದರೆ ಯಾರು?

ಬದರಿನಾಥ ದೇವಾಲಯದ ಪ್ರಧಾನ ಅರ್ಚಕರನ್ನು ‘ರಾವಲ್’ ಎಂದು ಕರೆಯಲಾಗುತ್ತದೆ. ಭಗವಂತನಿಗೆ ನಿತ್ಯ ಪೂಜೆ ಸಲ್ಲಿಸುವುದು ಹಾಗೂ ಪ್ರಮುಖ ಧಾರ್ಮಿಕ ಕಾರ್ಯಗಳನ್ನು ಶಾಸ್ತ್ರೋಕ್ತವಾಗಿ ನಡೆಸುವುದು ಇವರ ಜವಾಬ್ದಾರಿ. ಈ ರಾವಲ್ ಸಂಪ್ರದಾಯವನ್ನು ಜಗದ್ಗುರು ಆದಿ ಶಂಕರಾಚಾರ್ಯರು ಆರಂಭಿಸಿದರು ಎಂಬ ಪ್ರತೀತಿಯಿದೆ.

ಶತಮಾನಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದ ಪ್ರಕಾರ, ಬದರಿನಾಥ ದೇವಾಲಯದ ರಾವಲ್ ಕೇರಳದ ನಂಬೂದಿರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿರಬೇಕು. ಪ್ರಸ್ತುತ ಅಮರನಾಥ ನಂಬೂದಿರಿ ಅವರು ದೇವಾಲಯದ ಮುಖ್ಯ ಅರ್ಚಕರಾಗಿದ್ದಾರೆ. ರಾವಲ್ ಅವರು ಕಠಿಣ ಬ್ರಹ್ಮಚರ್ಯ ವ್ರತವನ್ನು ಪಾಲಿಸುವುದರ ಜೊತೆಗೆ ದೇವಾಲಯದ ಪೂಜಾ ನಿಯಮಗಳನ್ನು ಅನುಸರಿಸುತ್ತಾರೆ.

ಇದನ್ನೂ ಓದಿ:  ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರ ಸಾಗಿದ ವಾಯೇಜರ್-1; 49 ವರ್ಷಗಳ ಪಯಣದಲ್ಲಿ ಐತಿಹಾಸಿಕ ಸಾಧನೆ!

ಮಹಿಳೆಯ ವೇಷ ಧರಿಸುವುದರ ಹಿಂದಿನ ಕಾರಣವೇನು?

ಬದರಿನಾಥ ದೇವಾಲಯದ ಬಾಗಿಲು ಮುಚ್ಚುವ ಕೊನೆಯ ದಿನದಂದು ಲಕ್ಷ್ಮಿ ದೇವಿಯ ವಿಗ್ರಹವನ್ನು ಆಕೆಯ ಪ್ರತ್ಯೇಕ ದೇಗುಲದಿಂದ ತಂದು ಬದರಿ ವಿಶಾಲ ಸ್ವಾಮಿಯ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಚಳಿಗಾಲದ ಆರು ತಿಂಗಳು ಲಕ್ಷ್ಮಿ ದೇವಿಯು ಸ್ವಾಮಿಯ ಜೊತೆಯಲ್ಲೇ ಇರುತ್ತಾಳೆ ಎಂಬ ನಂಬಿಕೆಯಿದೆ. ಈ ವಿಗ್ರಹವನ್ನು ಸ್ಥಳಾಂತರಿಸುವ ಕಾರ್ಯವನ್ನು ರಾವಲ್ ಜಿ ಅವರೇ ನೆರವೇರಿಸುತ್ತಾರೆ.

ಧಾರ್ಮಿಕ ಸಂಪ್ರದಾಯದ ಪ್ರಕಾರ, ರಾವಲ್ ಜಿ ಅವರು ಬ್ರಹ್ಮಚಾರಿಯಾಗಿರುವುದರಿಂದ ಮಹಿಳೆಯರನ್ನು ಸ್ಪರ್ಶಿಸುವಂತಿಲ್ಲ ಎಂಬ ನಿಯಮವಿದೆ. ಮತ್ತೊಂದೆಡೆ, ಪುರುಷರು ಲಕ್ಷ್ಮಿ ದೇವಿಯ ವಿಗ್ರಹವನ್ನು ಮುಟ್ಟಬಾರದು ಎಂಬ ಸಂಪ್ರದಾಯವೂ ಇದೆ ಎಂದು ಹೇಳಲಾಗುತ್ತದೆ.

ಈ ಎರಡೂ ಸಂಪ್ರದಾಯಗಳಿಗೆ ಗೌರವ ನೀಡುವ ಉದ್ದೇಶದಿಂದ ರಾವಲ್ ಜಿ ಅವರು ಮಹಿಳೆಯ ವೇಷ ಧರಿಸುತ್ತಾರೆ. ತಾವು ಲಕ್ಷ್ಮಿ ದೇವಿಯ ಆಪ್ತ ಸಖಿಯ ರೂಪದಲ್ಲಿದ್ದೇವೆ ಎಂಬ ಭಾವನೆಯೊಂದಿಗೆ ವಿಗ್ರಹವನ್ನು ಎತ್ತಿಕೊಂಡು ಬಂದು ಬದರಿ ವಿಶಾಲ ಸ್ವಾಮಿಯ ಪಕ್ಕದಲ್ಲಿ ಪ್ರತಿಷ್ಠಾಪಿಸುತ್ತಾರೆ.

ಶತಮಾನಗಳಿಂದ ನಡೆದುಕೊಂಡು ಬಂದಿರುವ ಈ ಅಪರೂಪದ ಆಚರಣೆಯು ಬದರಿನಾಥ ಕ್ಷೇತ್ರದ ಧಾರ್ಮಿಕ ಪರಂಪರೆ, ಶಿಸ್ತು ಮತ್ತು ಭಕ್ತಿಯ ಸಂಕೇತವಾಗಿ ಗುರುತಿಸಿಕೊಂಡಿದೆ.

Leave a Reply

Your email address will not be published. Required fields are marked *