ಭಾರತಕ್ಕೆ ಅಮೆರಿಕ ಬೆದರಿಕೆ – ನೇರ ಟಾರ್ಗೆಟ್‌ ಎಂದಿದ್ದೇಕೆ?

ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ಮತ್ತೆ ಬಿಸಿಯೇರಿದೆ. ಅಮೆರಿಕದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಅವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತ ಅಮೆರಿಕದ ಸುಂಕ ತಪ್ಪಿಸಲು ಚೀನಾದ ಸರಕುಗಳನ್ನು ಮೂರನೇ ದೇಶದ ಮೂಲಕ ಕಳುಹಿಸುವ ಜಾಲದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ನವರೊ ಅವರ ಪ್ರಕಾರ, ಚೀನಾದಿಂದ ಬರುವ ಸರಕುಗಳನ್ನು ಬೇರೆ ದೇಶಗಳಲ್ಲಿ ಸಂಸ್ಕರಿಸಿ, ಹೊಸ ಲೇಬಲ್ ಹಾಕಿ ಅಥವಾ ಮರುಪ್ಯಾಕ್ ಮಾಡಿ ಅಮೆರಿಕಕ್ಕೆ ಕಳುಹಿಸಲಾಗುತ್ತಿದೆ. ಇದರಿಂದ ಅಮೆರಿಕಕ್ಕೆ ಪ್ರತಿವರ್ಷ ಸುಮಾರು 19ರಿಂದ 26 ಬಿಲಿಯನ್ ಡಾಲರ್ ನಷ್ಟವಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಈ ಜಾಲದಲ್ಲಿ ಭಾರತ ಸೇರಿದಂತೆ ಮೆಕ್ಸಿಕೊ, ಕೆನಡಾ, ಯುರೋಪಿಯನ್ ಒಕ್ಕೂಟ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನಂತಹ ದೇಶಗಳ ಹೆಸರುಗಳನ್ನು ನವರೊ ಉಲ್ಲೇಖಿಸಿದ್ದಾರೆ. 2018ರಿಂದಲೇ ಚೀನಾದ ಸರಕುಗಳ ಮೇಲಿನ ಅಮೆರಿಕದ ಸುಂಕ ತಪ್ಪಿಸಲು ಹಲವು ದೇಶಗಳ ಮೂಲಕ ವ್ಯಾಪಾರ ನಡೆಯುತ್ತಿದೆ ಎಂಬುದು ಅವರ ಆರೋಪ.

ಭಾರತವೇ ನೇರ ಟಾರ್ಗೆಟ್‌?
ಭಾರತದ ವಿಚಾರದಲ್ಲಿ ನವರೊ ಅವರ ಮಾತು ಮತ್ತಷ್ಟು ತೀವ್ರವಾಗಿತ್ತು. “ಭಾರತ ನಮ್ಮ ರಾಡಾರ್‌ನಲ್ಲಿದೆ” ಎಂಬ ರೀತಿಯಲ್ಲಿ ಎಚ್ಚರಿಕೆ ನೀಡಿರುವ ಅವರು, ಭಾರತವನ್ನು ಹಿಟ್‌ ಲಿಸ್ಟ್‌ನಲ್ಲಿರುವ ದೇಶಗಳ ಪೈಕಿ ಒಂದಾಗಿ ಬಣ್ಣಿಸಿದ್ದಾರೆ.

ಇದರ ಜೊತೆಗೆ ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ಕೆಲವು ದೇಶಗಳ ಮೇಲೆ 100%ವರೆಗೆ ಸುಂಕ ವಿಧಿಸುವ ಸಾಧ್ಯತೆ ಬಗ್ಗೆ ಅಮೆರಿಕದಿಂದ ಎಚ್ಚರಿಕೆ ಬಂದಿದೆ ಎಂದು ವರದಿಯಾಗಿದೆ.

ಈಗಾಗಲೇ ಭಾರತ-ಅಮೆರಿಕ ನಡುವೆ ಸುಂಕದ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದೆ. ಹೀಗಿರುವಾಗ ನವರೊ ಅವರ ಈ ಹೇಳಿಕೆ ಹೊಸ ರಾಜಕೀಯ ಮತ್ತು ವ್ಯಾಪಾರ ಚರ್ಚೆಗೆ ಕಾರಣವಾಗಿದೆ.

ಆದರೆ, ಭಾರತ ಚೀನಾದ ಸರಕುಗಳನ್ನು ಅಮೆರಿಕದ ಸುಂಕ ತಪ್ಪಿಸಲು ಮೂರನೇ ದೇಶದ ಮೂಲಕ ಕಳುಹಿಸುವ ಜಾಲದ ಭಾಗವಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಅಧಿಕೃತ ಪ್ರತಿಕ್ರಿಯೆ ಏನು ಎಂಬುದು ಈಗ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *