ಗುಟ್ಕಾ, ಪಾನ್ ಮಸಾಲ ಬ್ಯಾನ್ ಆದೇಶ ವಾಪಸ್ ಪಡೆದಿಲ್ಲ ಎಂದ ಯು.ಟಿ.ಖಾದರ್

ಬೆಂಗಳೂರು: ಗುಟ್ಕಾ ಹಾಗೂ ಪಾನ್ ಮಸಾಲದಲ್ಲಿ ನಿಕೋಟಿನ್ ಬಳಕೆಗೆ ಸಂಬಂಧಿಸಿದ ನಿಷೇಧ ಆದೇಶವನ್ನು ಸರ್ಕಾರ ವಾಪಸ್ ಪಡೆದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಪಾನ್ ಮಸಾಲದಲ್ಲಿ ನಿಕೋಟಿನ್ ಇರಬಾರದು ಎಂಬ ಆದೇಶವನ್ನು ಜನರ ಆರೋಗ್ಯದ ಹಿತದೃಷ್ಟಿಯಿಂದ ಮಾಡಲಾಗಿದೆ. ಇದರಿಂದ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

ಅಡಿಕೆ ಬೆಳೆಗಾರರು, ರೈತರು ಮತ್ತು ವ್ಯಾಪಾರಿಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಅಡಿಕೆ ಬೆಳೆಗಾರರಿಗೆ ತೊಂದರೆ ಕೊಡುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ. ಈ ನಿರ್ಧಾರದಿಂದ ಅಡಿಕೆ ಬೆಲೆ ಹೆಚ್ಚಾಗುವ ಸಾಧ್ಯತೆಯೇ ಇದೆ ಎಂದು ಖಾದರ್ ಹೇಳಿದರು.

‘ಗುಟ್ಕಾದಲ್ಲಿ ನಮ್ಮ ದೇಶದ ಅಡಿಕೆ ಬಳಕೆ ಮಾಡಲ್ಲ’

ಗುಟ್ಕಾ ತಯಾರಿಕೆಯಲ್ಲಿ ದೇಶದ ಅಡಿಕೆಯನ್ನು ಬಳಸುವುದಿಲ್ಲ. ನೇಪಾಳ ಹಾಗೂ ಬಾಂಗ್ಲಾದಿಂದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.

ಈ ಹಿಂದೆ ಗುಟ್ಕಾ ನಿಷೇಧ ಮಾಡಿದಾಗಲೂ ಅಡಿಕೆ ಬೆಲೆ ಕುಸಿಯುತ್ತದೆ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ ಮೂರು ತಿಂಗಳ ಬಳಿಕ ಅಡಿಕೆ ಬೆಲೆ ಹೆಚ್ಚಾಗಿತ್ತು. ಹೀಗಾಗಿ ಪಾನ್ ಮಸಾಲದಲ್ಲಿ ನಿಕೋಟಿನ್ ನಿಷೇಧಿಸುವುದರಿಂದ ಅಡಿಕೆ ಬೆಳೆಗಾರರು ಅಥವಾ ವ್ಯಾಪಾರಿಗಳಿಗೆ ಸಮಸ್ಯೆಯಾಗುವುದಿಲ್ಲ ಎಂದು ಅವರು ಹೇಳಿದರು.

‘ಆದೇಶ ವಾಪಸ್ ಪಡೆದಿಲ್ಲ’

ಈ ವಿಚಾರವಾಗಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿದ್ದು, ಆರೋಗ್ಯದ ದೃಷ್ಟಿಯಿಂದ ನಿರ್ಧಾರ ಉತ್ತಮವಾಗಿದೆ ಎಂದು ಸಿಎಂ ಹೇಳಿದ್ದಾರೆ. ಜೊತೆಗೆ ಅಡಿಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗಬಾರದು ಎಂಬ ಸೂಚನೆಯನ್ನೂ ನೀಡಿದ್ದಾರೆ ಎಂದು ಖಾದರ್ ತಿಳಿಸಿದರು.

ಮೂರು ತಿಂಗಳು ಕಾಯ್ದು ಫಲಿತಾಂಶ ನೋಡೋಣ. ಒಂದು ವೇಳೆ ಅಡಿಕೆ ಬೆಳೆಗಾರರಿಗೆ ನಷ್ಟವಾಗಿರುವುದು ಕಂಡುಬಂದರೆ, ಆಗ ಚರ್ಚೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರ್ಕಾರ ಅಡಿಕೆ ಬೆಳೆಗಾರರು ಹಾಗೂ ವ್ಯಾಪಾರಿಗಳಿಗೆ ಯಾವುದೇ ಸಮಸ್ಯೆ ಆಗಲು ಬಿಡುವುದಿಲ್ಲ ಎಂದು ಸಚಿವರು ಭರವಸೆ ನೀಡಿದರು.

Leave a Reply

Your email address will not be published. Required fields are marked *