Sugar Price: ಸಕ್ಕರೆ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಕೊಂಚ ರಿಲೀಫ್ ನೀಡಿದೆ. ದೇಶದಲ್ಲಿ ಸಕ್ಕರೆ ಕೊರತೆ ಉಂಟಾಗಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ. ಸದ್ಯದ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು, ಹೊಸ ಕಬ್ಬು ಕಟಾವು ಹಾಗೂ ಸಕ್ಕರೆ ಉತ್ಪಾದನೆ ಆರಂಭವಾದ ಬಳಿಕ ಬೆಲೆ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕಬ್ಬಿನ ಉತ್ಪಾದನೆಯನ್ನು ಎಥೆನಾಲ್ ತಯಾರಿಕೆಗೆ ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿರುವುದರಿಂದ ಸಕ್ಕರೆ ಕೊರತೆ ಉಂಟಾಗಿದೆ ಎಂಬ ಆರೋಪಗಳಿಗೂ ಕೇಂದ್ರ ಸ್ಪಷ್ಟನೆ ನೀಡಿದೆ. 2025-26ರಲ್ಲಿ ಎಥೆನಾಲ್ ಉತ್ಪಾದನೆಗೆ ಬಳಸಲಾಗುತ್ತಿರುವ ಸಕ್ಕರೆಯ ಪ್ರಮಾಣ 2023ಕ್ಕೆ ಹೋಲಿಸಿದರೆ ಸುಮಾರು ಶೇ.9ಕ್ಕೆ ಇಳಿಕೆಯಾಗಿದೆ. ಅಲ್ಲದೆ, ಎಥೆನಾಲ್ನ ಸುಮಾರು ಶೇ.75ರಷ್ಟು ಉತ್ಪಾದನೆ ಜೋಳ ಸೇರಿದಂತೆ ಇತರ ಧಾನ್ಯಗಳಿಂದ ಆಗುತ್ತಿದೆ ಎಂದು ತಿಳಿಸಿದೆ.
ಭಾರತ ವಿಶ್ವದ ಎರಡನೇ ಅತಿದೊಡ್ಡ ಕಬ್ಬು ಉತ್ಪಾದಕ ದೇಶವಾಗಿದ್ದು, ದೇಶದ ಸುಮಾರು 5 ಕೋಟಿ ರೈತರು ಹಾಗೂ 5 ಲಕ್ಷಕ್ಕೂ ಹೆಚ್ಚು ಗಿರಣಿ ಕಾರ್ಮಿಕರು ಸಕ್ಕರೆ ಉದ್ಯಮವನ್ನು ಅವಲಂಬಿಸಿದ್ದಾರೆ. 2025-26ರಲ್ಲಿ ಕಬ್ಬಿನ ಉತ್ಪಾದನೆ 500 ಮಿಲಿಯನ್ ಮೆಟ್ರಿಕ್ ಟನ್ಗೆ ತಲುಪಿದ್ದು, ಕಳೆದ ದಶಕದಲ್ಲಿ ಶೇ.43.5ರಷ್ಟು ಬೆಳವಣಿಗೆಯಾಗಿದೆ ಎಂದು ಕೇಂದ್ರ ತಿಳಿಸಿದೆ.
ಸಕ್ಕರೆ ಬೆಲೆ ₹55.70ಕ್ಕೆ ಏರಿಕೆ
ಕಳೆದ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಂದು ಕೆಜಿ ಸಕ್ಕರೆಯ ಬೆಲೆ ₹48.18ರಿಂದ ₹55.70ಕ್ಕೆ ಏರಿಕೆಯಾಗಿದೆ. ಹಬ್ಬದ ಸಮಯದ ಹೆಚ್ಚಿದ ಬೇಡಿಕೆ, ಭಾರೀ ಮಳೆ, ಕೀಟಗಳ ಹಾವಳಿ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯಿಂದ ಬೆಲೆ ಏರಿಕೆಯಾಗಿದೆ ಎಂದು ಕೇಂದ್ರ ಹೇಳಿದೆ.
ಆದರೆ ದೇಶೀಯ ಬಳಕೆಗೆ ಬೇಕಾಗುವಷ್ಟು ಸಕ್ಕರೆ ದಾಸ್ತಾನು ಇದೆ. ಹೀಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಅಕ್ಟೋಬರ್ ಬಳಿಕ ಬೆಲೆ ನಿಯಂತ್ರಣಕ್ಕೆ?
ಅಕ್ಟೋಬರ್ನಿಂದ ಹೊಸ ಸಕ್ಕರೆ ಕಬ್ಬು ಪುಡಿಮಾಡುವ ಸೀಸನ್ ಆರಂಭವಾಗಲಿದ್ದು, ಉತ್ಪಾದನೆ ಹೆಚ್ಚಾಗುವ ನಿರೀಕ್ಷೆಯಿದೆ. ಇದರಿಂದ ಸಕ್ಕರೆ ಬೆಲೆ ಕೂಡ ನಿಯಂತ್ರಣಕ್ಕೆ ಬರುವ ಸಾಧ್ಯತೆ ಇದೆ ಎಂದು ಕೇಂದ್ರ ತಿಳಿಸಿದೆ.
ಇನ್ನು ಸಕ್ಕರೆ ಅಕ್ರಮ ದಾಸ್ತಾನು ತಡೆಯಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆಗಸ್ಟ್ 1ರಿಂದ ನವೆಂಬರ್ 30ರವರೆಗೆ ಸಕ್ಕರೆ ವ್ಯಾಪಾರಿಗಳಿಗೆ ಗರಿಷ್ಠ 400 ಟನ್ ದಾಸ್ತಾನು ಮಿತಿ ವಿಧಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಬಳಸುವ ಕಂಪನಿಗಳು ಸೆಪ್ಟೆಂಬರ್ 1ರಿಂದ 15 ದಿನಗಳ ಬಳಕೆಗೆ ಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ದಾಸ್ತಾನು ಇಟ್ಟುಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.
ಹಬ್ಬದ ಸಮಯದಲ್ಲಿ ಸಕ್ಕರೆ ಕೊರತೆಯಾಗದಂತೆ ಅಕ್ಟೋಬರ್ 15ರಿಂದ ಸಕ್ಕರೆ ಕಾರ್ಖಾನೆಗಳು ಕಬ್ಬು ಪುಡಿಮಾಡುವ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿದೆ. ಉತ್ಪಾದನೆ ಹೆಚ್ಚಾದ ಬಳಿಕ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಇಳಿಕೆಯಾಗುವ ನಿರೀಕ್ಷೆ ಇದೆ.