‘ಮದುವೆ ಆಗುವುದು ಅಷ್ಟು ಮುಖ್ಯವಲ್ಲ’; ನಟಿ ರಮ್ಯಾ ಕೊಟ್ಟ ಖಡಕ್ ಉತ್ತರ

ನಟಿ ರಮ್ಯಾ ಅವರ ಮದುವೆ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇದೆ. ಈ ನಡುವೆ ಮದುವೆ ಕುರಿತು ರಮ್ಯಾ ಅವರು ಮಾತನಾಡಿರುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಕಾರ್ಯಕ್ರಮವೊಂದರಲ್ಲಿ ಪತ್ರಕರ್ತೆ ನಬಿಲಾ ಜಮಾಲ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಮ್ಯಾ, “ಮದುವೆ ಆಗುವುದು ಅಷ್ಟು ಮುಖ್ಯವೇ? ಖಂಡಿತಾ ಇಲ್ಲ. ನಾನು ಯಾರೆಂಬುದು ಮದುವೆಯಿಂದ ನಿರ್ಧಾರ ಆಗಲ್ಲ. ಮದುವೆ ಇಲ್ಲದೇ ನಾವು ಖುಷಿಯಾಗಿದ್ದೇವೆ ಅಲ್ಲವಾ? ಖುಷಿಯಾಗಿ ಇರುವುದೇ ಎಲ್ಲಕ್ಕಿಂತ ಮುಖ್ಯ” ಎಂದು ಹೇಳಿದ್ದಾರೆ.

ಮದುವೆ ಮತ್ತು ಸಂತೋಷ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾದಾಗ, “ಏನು ಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ” ಎಂದು ರಮ್ಯಾ ಹೇಳಿದ್ದಾರೆ.

ಅದೇ ವೇಳೆ ಮದುವೆಯನ್ನು ಸಂಪೂರ್ಣವಾಗಿ ವಿರೋಧಿಸಿಲ್ಲ. “ನಿಮಗೆ ಹೊಂದಿಕೆಯಾಗುವ ಸಂಗಾತಿ ಸಿಕ್ಕರೆ ಚೆನ್ನಾಗಿರುತ್ತದೆ. ಅವರು ನಿಮ್ಮ ಉತ್ತಮ ಸ್ನೇಹಿತರಾಗಿದ್ದು, ಅವರ ಜೊತೆ ಇಡೀ ಜೀವನ ಕಳೆಯಲು ಬಯಸಿದರೆ ಅದು ಉತ್ತಮ” ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಮನುಷ್ಯರ ಜೀವನದಲ್ಲಿ ಬದಲಾವಣೆ ನಿರಂತರವಾಗಿರುತ್ತದೆ. ಇಬ್ಬರು ಉತ್ತಮ ಸ್ನೇಹಿತರಾಗಿದ್ದು, ಅವರ ಮೌಲ್ಯಗಳು ಒಂದೇ ರೀತಿಯಾಗಿದ್ದರೆ ಮದುವೆ ಉತ್ತಮವಾಗಿರಬಹುದು ಎಂದು ರಮ್ಯಾ ಹೇಳಿದ್ದಾರೆ.

ಇನ್ನು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಅವರು, “ನನಗೆ ಇನ್ನೂ ಆ ರೀತಿಯ ವ್ಯಕ್ತಿ ಸಿಕ್ಕಿಲ್ಲ. ನಾನು ಆ ಬಗ್ಗೆ ಗಮನ ಕೂಡ ಹರಿಸುತ್ತಿಲ್ಲ. ಕೆಲಸ ಮಾಡುವುದರಲ್ಲಿ ಬ್ಯುಸಿ ಆಗಿದ್ದೇನೆ. ರಿಲೇಷನ್‌ಶಿಪ್‌ಗೆ ಸಮಯ ಬೇಕು” ಎಂದು ಹೇಳಿದ್ದಾರೆ.

ರಮ್ಯಾ ಅವರ ಈ ಮಾತುಗಳು ಇದೀಗ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿವೆ. ಆದಷ್ಟು ಬೇಗ ರಮ್ಯಾ ಮದುವೆ ಬಗ್ಗೆ ಗುಡ್ ನ್ಯೂಸ್ ನೀಡಲಿ, ಮತ್ತೆ ಸಿನಿಮಾಗಳಲ್ಲಿ ಸಕ್ರಿಯವಾಗಿ ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಸೆಯಾಗಿದೆ.

Leave a Reply

Your email address will not be published. Required fields are marked *