ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಅವರಿಗೆ ಬೆಂಗಳೂರಿನ 59ನೇ ಸಿಸಿಹೆಚ್ ಕೋರ್ಟ್ ಸಣ್ಣ ರಿಲೀಫ್ ನೀಡಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಬ್ಯಾರಕ್ ಬದಲಾಯಿಸುವಂತೆ ಪವಿತ್ರಾ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ.
ಪವಿತ್ರಾ ಗೌಡ ಅವರ ಆರೋಗ್ಯ ಪರಿಸ್ಥಿತಿಯನ್ನು ಪರಿಗಣಿಸಿರುವ ಕೋರ್ಟ್, ಜೈಲು ನಿಯಮಾವಳಿ ಹಾಗೂ ಕೈಪಿಡಿಗೆ ಅನುಗುಣವಾಗಿ ಬ್ಯಾರಕ್ ಬದಲಾವಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜೈಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಹೈಕೋರ್ಟ್ಗೆ ದರ್ಶನ್ ರಿಟ್ ಅರ್ಜಿ
ಇತ್ತ ಇದೇ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಕೂಡ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಸಾಕ್ಷ್ಯ ವಿಚಾರಣೆ ವೇಳೆ ತಮ್ಮನ್ನು ಖುದ್ದಾಗಿ ಕೋರ್ಟ್ಗೆ ಹಾಜರುಪಡಿಸಲು ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಿಚಾರಣೆಯನ್ನು ನೇರವಾಗಿ ಆಲಿಸುವುದು ಮತ್ತು ವೀಕ್ಷಿಸುವುದು ತಮ್ಮ ಹಕ್ಕು ಎಂದು ದರ್ಶನ್ ಅರ್ಜಿಯಲ್ಲಿ ತಿಳಿಸಿದ್ದಾರೆ. ಸಾಕ್ಷಿಯು ಆರೋಪಿಯ ಸಮಕ್ಷಮದಲ್ಲೇ ಹೇಳಿಕೆ ನೀಡಬೇಕು. ವಿಚಾರಣೆ ವೇಳೆ ವಕೀಲರಿಗೆ ಅಗತ್ಯ ಸೂಚನೆಗಳನ್ನು ನೀಡಲು ತಮಗೆ ಅವಕಾಶ ಇರಬೇಕು ಎಂದು ಅವರು ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ನಲ್ಲಿ ತಾಂತ್ರಿಕ ಸಮಸ್ಯೆ
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವಾಗ ಪದೇಪದೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ ಎಂದು ದರ್ಶನ್ ದೂರಿದ್ದಾರೆ. ಪರಪ್ಪನ ಅಗ್ರಹಾರ ಜೈಲು ಹಾಗೂ ಕೋರ್ಟ್ನಲ್ಲಿ ಸೂಕ್ತ ತಾಂತ್ರಿಕ ಉಪಕರಣಗಳ ಕೊರತೆಯಿದೆ. ಇರುವ ಸಾಧನಗಳನ್ನೂ ಇನ್ನೂ ಉನ್ನತೀಕರಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ವೇಳೆ ವಕೀಲರೊಂದಿಗೆ ನೇರವಾಗಿ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಡಿಯೋ ಕಾನ್ಫರೆನ್ಸ್ ಬದಲಿಗೆ ಖುದ್ದಾಗಿ ಕೋರ್ಟ್ಗೆ ಹಾಜರಾಗಿ ವಿಚಾರಣೆ ಆಲಿಸಲು ಅವಕಾಶ ನೀಡಬೇಕು ಎಂದು ದರ್ಶನ್ ಹೈಕೋರ್ಟ್ಗೆ ಮನವಿ ಮಾಡಿದ್ದಾರೆ.