ಬಾಯಿಗೆ ಹಾಕಿದ ರಸಗುಲ್ಲಾ ಸ್ಫೋಟ; ವ್ಯಕ್ತಿ ಸಾವು

ಮಧ್ಯಪ್ರದೇಶ: ರಸಗುಲ್ಲಾ ಎಂದು ಭಾವಿಸಿ ಬಾಯಿಗೆ ಹಾಕಿಕೊಂಡ ವಸ್ತುವೊಂದು ಸ್ಫೋಟಗೊಂಡ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ವರದಿಯಾಗಿದೆ. ಕುಟುಂಬದ ಪರಿಚಯಸ್ಥನೊಬ್ಬ ನೀಡಿದ ವಸ್ತುವನ್ನು ಸಿಹಿ ತಿನಿಸು ಎಂದು ನಂಬಿ ಬಾಯಿಗೆ ಹಾಕಿಕೊಂಡ ವ್ಯಕ್ತಿ ಕ್ಷಣಾರ್ಧದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮೃತರನ್ನು ರಾಜೇಂದ್ರ ಬರೋಟಿಯಾ ಎಂದು ಗುರುತಿಸಲಾಗಿದೆ. ರಾಜೇಂದ್ರ ಅವರು ಮನೆಯಲ್ಲಿದ್ದಾಗ ಅಲ್ಲಿಗೆ ಬಂದ ರಾಮ್ ಭಗತ್ ಬರೋಟಿಯಾ ಎಂಬಾತನೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ರಾಮ್ ಭಗತ್ ಮನೆಯಲ್ಲೇ ತಯಾರಿಸಿದ ಸ್ಫೋಟಕ ವಸ್ತುವೊಂದನ್ನು ರಾಜೇಂದ್ರ ಅವರಿಗೆ ನೀಡಿ, ಅದನ್ನು ರಸಗುಲ್ಲಾ ಎಂದು ನಂಬಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಸಿಹಿ ತಿನಿಸು ಎಂದು ಭಾವಿಸಿ ರಾಜೇಂದ್ರ ಆ ವಸ್ತುವನ್ನು ಬಾಯಿಗೆ ಹಾಕಿಕೊಂಡ ತಕ್ಷಣ ಅದು ಸ್ಫೋಟಗೊಂಡಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಕುಟುಂಬಸ್ಥರು ಮತ್ತು ನೆರೆಹೊರೆಯವರು ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಆದರೆ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ ಎನ್ನಲಾಗಿದೆ.

ಪ್ರಾಣಿಗಳನ್ನು ಕೊಲ್ಲಲು ಬಳಸುವ ಸ್ಫೋಟಕ?

ರಾಜೇಂದ್ರ ಅವರ ಪತ್ನಿ ಸುಶೀಲಾ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಸ್ಫೋಟಗೊಂಡ ವಸ್ತುವನ್ನು ಪ್ರಾಣಿಗಳನ್ನು ಕೊಲ್ಲಲು ಬಳಸುವ ನಾಡಬಾಂಬ್ ಎಂದು ಹೇಳಲಾಗಿದೆ.

ವಿಚಾರಣೆ ವೇಳೆ ರಾಮ್ ಭಗತ್, ಈ ವಸ್ತುವನ್ನು ತನಗೆ ಒಬ್ಬ ಬಾಲಕ ನೀಡಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಆ ಬಾಲಕನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆಗೆ ವೈಯಕ್ತಿಕ ದ್ವೇಷ ಕಾರಣವೇ ಅಥವಾ ಇದರ ಹಿಂದೆ ಬೇರೆ ಉದ್ದೇಶವಿದೆಯೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸ್ಫೋಟಕ ವಸ್ತುವನ್ನು ಯಾರು ತಯಾರಿಸಿದ್ದರು ಮತ್ತು ರಾಜೇಂದ್ರ ಅವರಿಗೆ ಅದನ್ನು ನೀಡಿದ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ.

Leave a Reply

Your email address will not be published. Required fields are marked *