ಗ್ಯಾಸ್ ಸಿಲಿಂಡರ್ ಮತ್ತೆ ದುಬಾರಿ? ಜನಸಾಮಾನ್ಯರಿಗೆ ಕೇಂದ್ರದಿಂದ ಬಿಗ್‌ ಶಾಕ್‌

ಸಾಮಾನ್ಯ ಜನರಿಗೆ ಮತ್ತೊಮ್ಮೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಶಾಕ್ ಎದುರಾಗುವ ಸಾಧ್ಯತೆ ಇದೆ. ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಪ್ರಸ್ತಾವನೆ ಜಾರಿಗೆ ಬಂದರೆ, ಗೃಹಬಳಕೆಯ ಸಿಲಿಂಡರ್ ಬೆಲೆ ಸುಮಾರು ₹18ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸದ್ಯ ಸರ್ಕಾರ ಎಲ್‌ಪಿಜಿ ಗ್ಯಾಸ್‌ಗೆ ಪ್ರತಿ ಕೆಜಿಗೆ ₹1.29 ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಪರಿಶೀಲಿಸುತ್ತಿದೆ. ಈ ಮೂಲಕ ವರ್ಷಕ್ಕೆ ಸುಮಾರು ₹4,375 ಕೋಟಿ ಆದಾಯ ಬರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಸಿಎನ್‌ಜಿ ಮೇಲೂ ಪ್ರತಿ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್‌ಗೆ ₹1.43 ಶುಲ್ಕ ವಿಧಿಸುವ ವಿಚಾರವೂ ಚರ್ಚೆಯಲ್ಲಿದೆ.

ಈ ಹೆಚ್ಚುವರಿ ಆದಾಯವನ್ನು ದೇಶದಲ್ಲಿ ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಸಂಗ್ರಹಣಾ ಮೂಲಸೌಕರ್ಯ ಅಭಿವೃದ್ಧಿಗೆ ಬಳಸುವ ಯೋಜನೆ ಇದೆ. ಯುದ್ಧ ಅಥವಾ ಜಾಗತಿಕ ತುರ್ತು ಪರಿಸ್ಥಿತಿಗಳ ವೇಳೆ ದೇಶದಲ್ಲಿ ಗ್ಯಾಸ್ ಕೊರತೆ ಉಂಟಾಗದಂತೆ ದೀರ್ಘಾವಧಿ ಸಂಗ್ರಹ ವ್ಯವಸ್ಥೆ ನಿರ್ಮಿಸುವುದು ಕೇಂದ್ರದ ಉದ್ದೇಶವಾಗಿದೆ.

ಅಧಿಕಾರಿಗಳ ಅಂದಾಜು ಪ್ರಕಾರ, ಮುಂದಿನ 10 ವರ್ಷಗಳಲ್ಲಿ ಈ ಯೋಜನೆಗೆ ಸುಮಾರು 42 ಬಿಲಿಯನ್ ಡಾಲರ್ (ಸುಮಾರು ₹4 ಲಕ್ಷ ಕೋಟಿ) ವೆಚ್ಚವಾಗಲಿದೆ. ಇದರ ಬಹುಪಾಲು ಹಣವನ್ನು ಹೊಸ ಶೇಖರಣಾ ಕೇಂದ್ರಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ.

ಆದರೆ ಈ ಪ್ರಸ್ತಾವನೆಗೆ ಇನ್ನೂ ಕೇಂದ್ರ ಸರ್ಕಾರದ ಅಂತಿಮ ಅನುಮೋದನೆ ಸಿಕ್ಕಿಲ್ಲ. ವಿವಿಧ ಸಚಿವಾಲಯಗಳ ನಡುವೆ ಚರ್ಚೆ ನಡೆಯುತ್ತಿದ್ದು, ಸಚಿವ ಸಂಪುಟದ ಒಪ್ಪಿಗೆ ಸಿಕ್ಕ ಬಳಿಕವೇ ಅಂತಿಮ ನಿರ್ಧಾರವಾಗಲಿದೆ. ಆದ್ದರಿಂದ ಸದ್ಯಕ್ಕೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಅಧಿಕೃತ ಘೋಷಣೆ ಹೊರಬಂದಿಲ್ಲ.

 

Leave a Reply

Your email address will not be published. Required fields are marked *