ಅಮಿತಾಬ್ ಬಚ್ಚನ್, ಅಭಿಷೇಕ್‌ಗೆ ಜೀವ ಬೆದರಿಕೆ; ‘ಬುಲೆಟ್‌ಪ್ರೂಫ್ ಗಾಜು ಬಳಸಿದರೂ ಗುಂಡಿಕ್ಕುತ್ತೇವೆ’ ಎಂದ ಗೋಲ್ಡಿ ಧಿಲ್ಲೋನ್!

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಮತ್ತು ಅವರ ಪುತ್ರ ಅಭಿಷೇಕ್ ಬಚ್ಚನ್‌ಗೆ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ಇಬ್ಬರು ಶೂಟರ್‌ಗಳನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ಈ ಬೆದರಿಕೆ ಸಂದೇಶ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.

ಗೋಲ್ಡಿ ಧಿಲ್ಲೋನ್ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ವಿಕಾಸ್ ಠಾಕೂರ್ ಮತ್ತು ದೀಪಕ್ ಸಿಂಗ್ ಬಂಧನದಿಂದ ತಮ್ಮ ಯೋಜನೆಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾನೆ. ಅಲ್ಲದೆ, ಮುಂಬೈನಲ್ಲಿ 200 ಜನ ಸಿದ್ಧವಾಗಿದ್ದಾರೆ ಎಂದು ಹೇಳಿಕೊಂಡಿದ್ದಾನೆ.

ಅಮಿತಾಬ್, ಅಭಿಷೇಕ್‌ಗೆ ನೇರ ಎಚ್ಚರಿಕೆ

1984ರ ಸಿಖ್ ವಿರೋಧಿ ಗಲಭೆಗಳನ್ನು ಉಲ್ಲೇಖಿಸಿರುವ ಧಿಲ್ಲೋನ್, ಆ ಹಿಂಸಾಚಾರಕ್ಕೆ ಕಾರಣರಾದವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾನೆ. ಸಿಖ್ ಸಮುದಾಯದ ವಿರುದ್ಧ ಹೇಳಿಕೆ ನೀಡುವವರನ್ನು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಬಿಡುವುದಿಲ್ಲ ಎಂದೂ ಎಚ್ಚರಿಸಿದ್ದಾನೆ.

ಇದೇ ಪೋಸ್ಟ್‌ನಲ್ಲಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರನ್ನು ಉಲ್ಲೇಖಿಸಿ, ಎಷ್ಟೇ ಬುಲೆಟ್‌ಪ್ರೂಫ್ ಗಾಜು ಅಥವಾ ಭದ್ರತೆ ಹೊಂದಿದ್ದರೂ ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಜಲ್ಸಾ ಮನೆಗೆ ಈ ಹಿಂದೆಯೂ ಬೆದರಿಕೆ

ಅಮಿತಾಬ್ ಬಚ್ಚನ್ ಅವರ ಮುಂಬೈನ ಜಲ್ಸಾ ನಿವಾಸಕ್ಕೆ ಈ ಹಿಂದೆಯೂ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದವು ಎಂದು ವರದಿಯಾಗಿದೆ. ಅಲ್ಲದೆ, ಜಲ್ಸಾ ಮನೆಯ ಹೊರಗೆ ಗುಂಡಿನ ದಾಳಿ ನಡೆಸಲು ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಗೋಲ್ಡಿ ಧಿಲ್ಲೋನ್‌ನ ಬೆದರಿಕೆ ಪೋಸ್ಟ್ ಹಿನ್ನೆಲೆಯಲ್ಲಿ ಅಮಿತಾಬ್ ಮತ್ತು ಅಭಿಷೇಕ್ ಬಚ್ಚನ್ ಅವರ ಭದ್ರತೆ ಹಾಗೂ ಪೊಲೀಸ್ ತನಿಖೆಯ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave a Reply

Your email address will not be published. Required fields are marked *