ಮಾಫಿ ಸಾಕ್ಷಿ ಕಂಟಕ; ದರ್ಶನ್ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ

ಮಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಮಾಫಿ ಸಾಕ್ಷಿಯ ವಿಚಾರ ಮತ್ತಷ್ಟು ಕಂಟಕವಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಯ ನಡುವೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ದೈವದ ಮೊರೆ ಹೋಗಿದ್ದಾರೆ.

ಮಂಗಳೂರಿನ ಮಂದಾರಬೈಲು ಶ್ರೀರಕ್ತೇಶ್ವರಿ ಮಂತ್ರದೇವತಾ ಹಾಗೂ ಗುಳಿಗ ದೈವದ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ಕೋಲ ಸೇವೆ ನಡೆಸಿ, ವಿಶೇಷ ಪೂಜೆ ಹಾಗೂ ಹರಕೆ ಕೂಡ ಸಲ್ಲಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವ ಹಿನ್ನೆಲೆಯಲ್ಲಿ ದರ್ಶನ್‌ಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ವಿಜಯಲಕ್ಷ್ಮಿ ದೈವದ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿ, ಪ್ರಕರಣದಿಂದ ಪಾರಾಗಲು ದೈವಾನುಗ್ರಹ ಕೋರಿದ್ದಾರೆ ಎನ್ನಲಾಗಿದೆ.

ಪ್ರದೋಷ್ ಬಗ್ಗೆ ಪೊಲೀಸರ ವರದಿ
ಈ ನಡುವೆ ಪ್ರದೋಷ್‌ನ ಅಪರಾಧಿಕ ಹಿನ್ನೆಲೆ ಬಗ್ಗೆಯೂ ಪೊಲೀಸರು ಕೋರ್ಟ್‌ಗೆ ವರದಿ ಸಲ್ಲಿಸಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿರುವ ವರದಿ ಪ್ರಕಾರ, ರೇಣುಕಾಸ್ವಾಮಿ ಕೊಲೆ ಪ್ರಕರಣ ಹೊರತುಪಡಿಸಿ ಪ್ರದೋಷ್ ವಿರುದ್ಧ ಬೇರೆ ಯಾವುದೇ ಪ್ರಕರಣ ಇಲ್ಲ ಎಂದು ಎಸಿಪಿ ಮಾಹಿತಿ ನೀಡಿದ್ದಾರೆ.

ಜೈಲಿನಲ್ಲಿದ್ದ ವೇಳೆ ಪ್ರದೋಷ್‌ನ ನಡವಳಿಕೆ ಹೇಗಿತ್ತು ಎಂಬುದರ ಬಗ್ಗೆಯೂ ವರದಿ ನೀಡುವಂತೆ ಕೋರ್ಟ್ ಸೂಚಿಸಿತ್ತು. ಮಾಫಿ ಸಾಕ್ಷಿ ವಿಚಾರದಲ್ಲಿ ಮುಂದಿನ ಕೋರ್ಟ್ ಪ್ರಕ್ರಿಯೆ ಏನಾಗಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *