‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನ ಘೋಷಿಸಿದ ಸಿಜೆಪಿ; ದೇಶಾದ್ಯಂತ ಪ್ರವಾಸಕ್ಕೆ ಅಭಿಜೀತ್ ದೀಪ್ಕೆ

ಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ‘ಕ್ಯಾ ಬೋಲ್ಟಿ ಪಬ್ಲಿಕ್’ ಹೆಸರಿನ ರಾಷ್ಟ್ರವ್ಯಾಪಿ ಅಭಿಯಾನ ಘೋಷಿಸಿದ್ದಾರೆ. ಸೆಪ್ಟೆಂಬರ್‌ನಿಂದ ದೇಶದಾದ್ಯಂತ ಪ್ರವಾಸ ಕೈಗೊಂಡು ನಿರುದ್ಯೋಗ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯದ ವಿಚಾರಗಳನ್ನು ಜನರ ಮುಂದೆ ತರುವುದಾಗಿ ತಿಳಿಸಿದ್ದಾರೆ.

ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿ, ‘ಕ್ಯಾ ಬೋಲ್ಟಿ ಪಬ್ಲಿಕ್’ ಅಭಿಯಾನದ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸುವುದಾಗಿ ಹೇಳಿದರು. ಸಿಜೆಪಿ ರಾಜಕೀಯ ಪಕ್ಷವಾಗಿ ಬದಲಾಗದೆ, ಜನರ ಧ್ವನಿಯಾಗಿ ಒತ್ತಡದ ಗುಂಪಾಗಿಯೇ ಕಾರ್ಯನಿರ್ವಹಿಸುವುದಾಗಿ ಸ್ಪಷ್ಟಪಡಿಸಿದರು.

ದೀಪ್ಕೆ ಮಾತನಾಡಿ, ದೇಶದಲ್ಲಿ ಸಾಂಸ್ಥಿಕ ಹೊಣೆಗಾರಿಕೆ ಅಪಾಯಕಾರಿ ಮಟ್ಟಕ್ಕೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು. “ಮೊದಲು ಮತದಾರರು ಸರ್ಕಾರವನ್ನು ಆಯ್ಕೆ ಮಾಡುತ್ತಿದ್ದರು. ಈಗ ಸರ್ಕಾರವೇ ಯಾರಿಗೆ ಮತ ಹಾಕಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣಾ ಆಯೋಗದ ಹೊಣೆಗಾರಿಕೆಯನ್ನು ಬಲಪಡಿಸಬೇಕಿದೆ” ಎಂದು ಹೇಳಿದರು.

ನಿರುದ್ಯೋಗವೇ ದೇಶದ ಅತಿ ದೊಡ್ಡ ಸಮಸ್ಯೆ ಎಂದು ಹೇಳಿದ ಅವರು, ಗುಣಮಟ್ಟದ ಉದ್ಯೋಗ ಸೃಷ್ಟಿ ಹಾಗೂ ಶಿಕ್ಷಣ ಸುಧಾರಣೆಯನ್ನು ತಮ್ಮ ಅಭಿಯಾನದ ಪ್ರಮುಖ ಅಂಶವಾಗಿಸಿಕೊಳ್ಳುವುದಾಗಿ ತಿಳಿಸಿದರು. ಶಿಕ್ಷಣವು ವ್ಯಾಪಾರವಾಗಬಾರದು, ಎಲ್ಲರಿಗೂ ಕೈಗೆಟುಕುವಂತಿರಬೇಕು ಎಂದು ಅಭಿಪ್ರಾಯಪಟ್ಟರು.

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದ ಸಿಜೆಪಿ ಕೋರ್ ತಂಡದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೀಪ್ಕೆ, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿದ್ಯಾರ್ಥಿ ಹೋರಾಟದ ದೊಡ್ಡ ಗೆಲುವು ಎಂದು ಹೇಳಿದರು. ವಿದ್ಯಾರ್ಥಿಗಳ ಜೊತೆಗೆ ನಿರುದ್ಯೋಗಿ ಯುವಕರ ಹೋರಾಟವೂ ದೇಶದ ಗಮನ ಸೆಳೆದಿದೆ ಎಂದರು.

ಮಾಧ್ಯಮಗಳ ವಿಶ್ವಾಸಾರ್ಹತೆಯನ್ನು ಮರಳಿ ಕಟ್ಟಬೇಕಿದೆ ಎಂದು ಹೇಳಿದ ಅವರು, ದೇಶದ 35 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರ ಸಮಸ್ಯೆಗಳು ರಾಜಕೀಯ ಚರ್ಚೆಯಲ್ಲಿ ಕಡೆಗಣನೆಗೊಳಗಾಗಿವೆ ಎಂದು ಆರೋಪಿಸಿದರು. ಯುವಜನರ ಧ್ವನಿಯನ್ನು ರಾಷ್ಟ್ರ ಮಟ್ಟದಲ್ಲಿ ತಲುಪಿಸುವ ಕೆಲಸವನ್ನು ಸಿಜೆಪಿ ಮಾಡಲಿದೆ ಎಂದು ಹೇಳಿದರು.

 

Leave a Reply

Your email address will not be published. Required fields are marked *