ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಗಳಾಗಿದ್ದ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಸಿಂಧೋಗಿ ಇದೀಗ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪರಿಚಯವಾಗಿ, ಸ್ನೇಹಿತರಾಗಿದ್ದ ಈ ಜೋಡಿ ಈಗ ಬಾಳ ಸಂಗಾತಿಗಳಾಗಲು ನಿರ್ಧರಿಸಿದೆ. ಇಂದು (ನವೆಂಬರ್ 22) ಬೆಂಗಳೂರಿನಲ್ಲಿ ಕುಟುಂಬಸ್ಥರು, ಆಪ್ತರು ಹಾಗೂ ಕಿರುತೆರೆ ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಜೋಡಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸ್ನೇಹದಿಂದ ಪ್ರೀತಿಗೆ ಬೆಳೆದ ಪಯಣ
ಬಿಗ್ ಬಾಸ್ ಮನೆಯಲ್ಲಿ ಆರಂಭವಾದ ಪರಿಚಯ, ಕಾರ್ಯಕ್ರಮ ಮುಗಿದ ಬಳಿಕವೂ ಮುಂದುವರಿದಿತ್ತು. ಒಟ್ಟಿಗೆ ಕೆಲಸ ಮಾಡುತ್ತಿದ್ದಂತೆ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿದೆ. ನಿಶ್ಚಿತಾರ್ಥದ ವೇಳೆ ಮಾತನಾಡಿದ ಶಿಶಿರ್, ತಮ್ಮ ಪ್ರೇಮಕಥೆ ನೇರವಾಗಿ ಪ್ರೀತಿಯಿಂದ ಆರಂಭವಾಗಲಿಲ್ಲ. ಮೊದಲು ಪರಿಚಯ, ನಂತರ ಸ್ನೇಹ, ಪರಸ್ಪರ ಗೌರವ ಬೆಳೆದು ಬಳಿಕ ಪ್ರೀತಿಯಾಯಿತು ಎಂದು ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಪ್ರೀತಿ ಇರಲಿಲ್ಲವಾದರೂ, ಐಶ್ವರ್ಯ ಬಗ್ಗೆ ವಿಶೇಷ ಭಾವನೆ ಇತ್ತು ಎಂದಿದ್ದಾರೆ. ಅಷ್ಟೇ ಅಲ್ಲ, ಮೊದಲು ಪ್ರಪೋಸ್ ಮಾಡಿದ್ದು ಐಶ್ವರ್ಯಾ ಎಂಬ ವಿಚಾರವನ್ನೂ ಹಂಚಿಕೊಂಡಿದ್ದಾರೆ.
ಫೆಬ್ರವರಿ 1ರಂದು ಮದುವೆ
ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ಈ ಜೋಡಿ ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿದೆ. ಮುಂದಿನ ವರ್ಷ ಫೆಬ್ರವರಿ 1ರಂದು ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಸಿಂಧೋಗಿ ಮದುವೆಯಾಗಲಿದ್ದಾರೆ. ಇವರ ಮದುವೆಯ ಸುದ್ದಿಯಿಂದ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಟ್ರೋಲರ್ಗಳಿಗೆ ಹಾಸ್ಯಭರಿತ ಉತ್ತರ ನೀಡಿದ್ದ ಜೋಡಿ
ಕೆಲವು ದಿನಗಳ ಹಿಂದೆ ಕ್ರಿಯೇಟಿವ್ ವಿಡಿಯೋ ಮೂಲಕ ತಮ್ಮ ಪ್ರೀತಿಯ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದ ಈ ಜೋಡಿ, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದವರಿಗೂ ಹಾಸ್ಯಭರಿತವಾಗಿ ಉತ್ತರ ನೀಡಿತ್ತು. ಕೆಲವೇ ದಿನಗಳಲ್ಲಿ ಬ್ರೇಕಪ್ ಆಗುತ್ತದೆ ಎಂದು ಕಾಮೆಂಟ್ ಮಾಡುತ್ತಿದ್ದವರಿಗೆ ತಿರುಗೇಟು ನೀಡಿದ್ದ ಶಿಶಿರ್ ಮತ್ತು ಐಶ್ವರ್ಯಾ, ತಾವು ಅಣ್ಣ-ತಂಗಿ, ಬೆಸ್ಟ್ ಫ್ರೆಂಡ್ಸ್ ಅಥವಾ ಸಿಚುಯೇಷನ್ಶಿಪ್ನಲ್ಲಿಲ್ಲ, ಬದಲಿಗೆ ಜೀವನದ ಪಯಣವನ್ನು ಒಟ್ಟಿಗೆ ಆರಂಭಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಿದ್ದ ‘ಐಶಿರ್’ ಜೋಡಿ ಇದೀಗ ನಿಶ್ಚಿತಾರ್ಥದ ಮೂಲಕ ಹೊಸ ಸಂಭ್ರಮದಲ್ಲಿದೆ.


