ಸಿಟಿಆರ್​​ನಲ್ಲಿ ದೋಸೆ, ಕಾಫಿ ಸವಿದ ದೀಪಿಕಾ ಪಡುಕೋಣೆ; ಫೇವರಿಟ್ ಹೋಟೆಲ್‌ಗೆ ಭೇಟಿ

ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಅಪ್ಪಟ ಬೆಂಗಳೂರಿನ ಹುಡುಗಿ. ಹಲವು ವರ್ಷಗಳಿಂದ ಮುಂಬೈನಲ್ಲಿ ನೆಲೆಸಿದ್ದರೂ ಬೆಂಗಳೂರಿನ ಮೇಲಿನ ಅವರ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇದೀಗ ಬೆಂಗಳೂರಿಗೆ ಆಗಮಿಸಿರುವ ನಟಿ, ಮಲ್ಲೇಶ್ವರಂನ ಪ್ರಸಿದ್ಧ ಸಿಟಿಆರ್ (ಸೆಂಟ್ರಲ್ ಟಿಫಿನ್ ರೂಂ) ಹೋಟೆಲ್‌ಗೆ ಭೇಟಿ ನೀಡಿ ದೋಸೆ ಹಾಗೂ ಕಾಫಿ ಸವಿದಿದ್ದಾರೆ. ನವೆಂಬರ್ 22ರಂದು ದೀಪಿಕಾ ಹೋಟೆಲ್‌ಗೆ ಭೇಟಿ ನೀಡಿರುವ ವಿಚಾರವನ್ನು ಸಿಟಿಆರ್ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ. ಜೊತೆಗೆ ನಟಿಯೊಂದಿಗಿನ ಫೋಟೋವನ್ನೂ ಪೋಸ್ಟ್ ಮಾಡಿದೆ.

ಸಿಟಿಆರ್ ದೋಸೆ ಅಂದ್ರೆ ದೀಪಿಕಾಗೆ ಅಚ್ಚುಮೆಚ್ಚು!

ಮಲ್ಲೇಶ್ವರಂನ ಸಿಟಿಆರ್ ತನ್ನ ಬೆಣ್ಣೆ ಸವರಿದ ಗರಿಗರಿಯಾದ ದೋಸೆ, ಫಿಲ್ಟರ್ ಕಾಫಿ ಸೇರಿದಂತೆ ರುಚಿಕರ ತಿನಿಸುಗಳಿಗೆ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಬೆಂಗಳೂರಿಗರಷ್ಟೇ ಅಲ್ಲದೆ, ಬೇರೆ ನಗರಗಳಿಂದ ಬರುವವರೂ ಇಲ್ಲಿನ ದೋಸೆಯನ್ನು ಸವಿಯಲು ಇಷ್ಟಪಡುತ್ತಾರೆ. ದೀಪಿಕಾ ಪಡುಕೋಣೆ ಅವರಿಗೂ ಈ ಹೋಟೆಲ್ ಅಚ್ಚುಮೆಚ್ಚು. ಈ ಹಿಂದೆ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ಬೆಂಗಳೂರಿನ ಆಹಾರ ತಾಣಗಳ ಬಗ್ಗೆ ಮಾತನಾಡಿದ್ದ ಅವರು, ಸಿಟಿಆರ್ ದೋಸೆ, ವೀಣಾ ಸ್ಟೋರ್‌ನ ಇಡ್ಲಿ ಹಾಗೂ ಇಂದಿರಾನಗರದ ಕಾರ್ನರ್ ಹೌಸ್ ಐಸ್‌ಕ್ರೀಮ್ ಇಷ್ಟವೆಂದು ಹೇಳಿಕೊಂಡಿದ್ದರು. ಇದೀಗ ತಮ್ಮ ನೆಚ್ಚಿನ ಹೋಟೆಲ್‌ಗೆ ಭೇಟಿ ನೀಡಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಕೂಡ ಭೇಟಿ ನೀಡಿದ್ದರು!

ಸಿಟಿಆರ್ ಕೇವಲ ಬೆಂಗಳೂರಿಗರ ನೆಚ್ಚಿನ ಹೋಟೆಲ್ ಮಾತ್ರವಲ್ಲ, ಹಲವು ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚಿನ ತಾಣವಾಗಿದೆ. ಕೆಲವು ವರ್ಷಗಳ ಹಿಂದೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಕೂಡ ಈ ಹೋಟೆಲ್‌ಗೆ ಭೇಟಿ ನೀಡಿದ್ದರು. ಅನುಷ್ಕಾ ಅವರ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ನಡೆದಿರುವುದರಿಂದ ಅವರಿಗೆ ಕೂಡ ನಗರದ ಹಲವು ಆಹಾರ ತಾಣಗಳ ಪರಿಚಯವಿದೆ. ಇದೀಗ ದೀಪಿಕಾ ಪಡುಕೋಣೆ ಅವರ ಭೇಟಿಯೂ ಸಿಟಿಆರ್‌ನ ಜನಪ್ರಿಯತೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

Leave a Reply

Your email address will not be published. Required fields are marked *