BBK 13: ನೂರಾರು ಆಡಿಷನ್‌, ಹಲವು ರಿಜೆಕ್ಷನ್‌; ಆಸಿಯಾ ಫಿರ್ದೋಸ್‌ ಬಿಗ್‌ಬಾಸ್‌ ಮನೆ ತಲುಪಿದ ಜರ್ನಿ ಹೀಗಿದೆ!

BBK 13:  ಕಿರುತೆರೆಯಲ್ಲಿ ಈಗಾಗಲೇ ಪರಿಚಿತವಾಗಿರುವ ನಟಿ ಆಸಿಯಾ ಫಿರ್ದೋಸ್‌ ಇದೀಗ ಬಿಗ್‌ಬಾಸ್‌ ಕನ್ನಡ ಸೀಸನ್‌ 13ಕ್ಕೆ ಎಂಟ್ರಿ ಕೊಟ್ಟಿದ್ದಾರೆ. ‘ಕನ್ಯಾಕುಮಾರಿ’ ಮತ್ತು ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಹತ್ತಿರವಾಗಿದ್ದ ಆಸಿಯಾ, ಬಿಗ್‌ಬಾಸ್‌ ವೇದಿಕೆಯಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ದಾವಣಗೆರೆಯ ಮೂಲದ ಆಸಿಯಾ, ಬೆಂಗಳೂರಿನ ಸೇಂಟ್ ಕ್ಲಾರೆಟ್ ಕಾಲೇಜಿನಲ್ಲಿ ಬಿಬಿಎ ಪದವಿ ಪಡೆದಿದ್ದಾರೆ. 2020ರಲ್ಲಿ ಡಿಗ್ರಿ ಮುಗಿಸಿದ ಬಳಿಕ ನ್ಯೂಸ್‌ ಚಾನಲ್‌ನಲ್ಲಿ ಆಂಕರ್‌ ಆಗಿಯೂ ಕೆಲಸ ಮಾಡಿದ್ದಾರೆ. ಇದರ ಜೊತೆಗೆ ಮಾಡೆಲಿಂಗ್‌ ಮಾಡುತ್ತಾ, ನಟನೆಗಾಗಿ ಆಡಿಷನ್‌ಗಳನ್ನು ನೀಡುತ್ತಿದ್ದರು.

ನಟಿಯಾಗಬೇಕು ಎಂಬ ಆಸೆಯಿಂದ ಆಸಿಯಾ ಸಾಕಷ್ಟು ಆಡಿಷನ್‌ಗಳಿಗೆ ಹೋಗಿದ್ದಾರೆ. ನೂರಾರು ಆಡಿಷನ್‌ಗಳ ಬಳಿಕ ಅವರಿಗೆ ಉದಯ ಟಿವಿಯ ‘ನಾನು ನನ್ನ ಕನಸು’ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ಶುರುವಾದ ಅವರ ನಟನೆ ಜರ್ನಿ ಮುಂದೆ ‘ಕನ್ಯಾಕುಮಾರಿ’ ಧಾರಾವಾಹಿಗೆ ಕರೆದುಕೊಂಡು ಹೋಯಿತು.

‘ಕನ್ಯಾಕುಮಾರಿ’ ಕೊಟ್ಟ ಬಿಗ್ ಬ್ರೇಕ್

‘ಕನ್ಯಾಕುಮಾರಿ’ ಧಾರಾವಾಹಿಗೆ ಆಸಿಯಾ ಮೊದಲು ನೆಗೆಟಿವ್ ಪಾತ್ರಕ್ಕಾಗಿ ಆಡಿಷನ್‌ ನೀಡಿದ್ದರಂತೆ. ಆದರೆ ನಂತರ ಅವರಿಗೆ ನಾಯಕಿ ಕನ್ನಿಕಾ ಪಾತ್ರ ಸಿಕ್ಕಿತು. ಈ ಧಾರಾವಾಹಿ ಆಸಿಯಾ ಅವರಿಗೆ ದೊಡ್ಡ ಬ್ರೇಕ್ ನೀಡಿದ್ದು, ಕಿರುತೆರೆ ವೀಕ್ಷಕರಲ್ಲಿ ಅವರಿಗೊಂದು ಗುರುತು ಸಿಕ್ಕಿತು.

ಆ ಬಳಿಕ ಜೀ ಕನ್ನಡದ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೂಲಕ ಮತ್ತಷ್ಟು ಜನರಿಗೆ ಹತ್ತಿರವಾದರು. ಧಾರಾವಾಹಿ ಮುಗಿದ ಬೆನ್ನಲ್ಲೇ ಈಗ ನೇರವಾಗಿ ಬಿಗ್‌ಬಾಸ್‌ ಮನೆಗೆ ಕಾಲಿಟ್ಟಿದ್ದಾರೆ.

‘ನಾನು ಬೇಗ ಫ್ರೆಂಡ್ಸ್ ಮಾಡಿಕೊಳ್ಳಲ್ಲ’

ಬಿಗ್‌ಬಾಸ್‌ ವೇದಿಕೆಯಲ್ಲಿ ತಮ್ಮ ಸ್ವಭಾವದ ಬಗ್ಗೆಯೂ ಆಸಿಯಾ ಮಾತನಾಡಿದ್ದಾರೆ. ತಾವು ಫನ್‌ ಲವಿಂಗ್‌ ಪರ್ಸನ್‌ ಆಗಿದ್ದು, ಸಾಧ್ಯವಾದಷ್ಟು ಪಾಸಿಟಿವ್ ಆಗಿರಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ. ಫ್ರೆಂಡ್ಸ್‌ ಜೊತೆ ಸಮಯ ಕಳೆಯುವುದು, ಸುತ್ತಾಡುವುದು ಮತ್ತು ಒಬ್ಬರೇ ಇದ್ದಾಗ ಹಾಡುತ್ತಾ ಇರುವುದು ಇಷ್ಟ ಎಂದು ಹೇಳಿಕೊಂಡಿದ್ದಾರೆ.

ಆದರೆ ತಾವು ಬೇಗ ಯಾರೊಂದಿಗೂ ಫ್ರೆಂಡ್‌ಶಿಪ್‌ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. ಅದೇ ತಮ್ಮ ವೀಕ್ನೆಸ್‌ ಆಗಿರಬಹುದು, ಆದರೆ ಒಮ್ಮೆ ಸ್ನೇಹ ಬೆಳೆಸಿದರೆ ಕೊನೆಯವರೆಗೂ ಆ ಸಂಬಂಧವನ್ನು ನಿಭಾಯಿಸುತ್ತೇನೆ ಎಂದು ಆಸಿಯಾ ಹೇಳಿದ್ದಾರೆ.

ನಟನೆಗೆ ಕುಟುಂಬದ ವಿರೋಧ ಇತ್ತು

ಆಸಿಯಾ ಅವರ ನಟನೆ ಜರ್ನಿ ಅಷ್ಟು ಸುಲಭವಾಗಿರಲಿಲ್ಲ. ಮಿಡಲ್‌ ಕ್ಲಾಸ್‌ ಮತ್ತು ಆರ್ಥೊಡಾಕ್ಸ್‌ ಕುಟುಂಬದಿಂದ ಬಂದಿರುವ ತಮಗೆ ಸಿನಿಮಾ ಹಾಗೂ ಕಿರುತೆರೆ ಇಂಡಸ್ಟ್ರಿಗೆ ಬರುವ ಕನಸು ಕಾಣುವುದೇ ಸುಲಭವಾಗಿರಲಿಲ್ಲ ಎಂದು ಹೇಳಿದ್ದಾರೆ.

ಆರಂಭದಲ್ಲಿ ಕುಟುಂಬದವರು ಅವರ ನಿರ್ಧಾರವನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಸಮಯ ಕಳೆದಂತೆ ಅವರ ಕನಸನ್ನು ಅರ್ಥ ಮಾಡಿಕೊಂಡು ಕುಟುಂಬದವರು ಬೆಂಬಲ ನೀಡಿದ್ದಾರೆ. ಅದರಲ್ಲೂ ತಮ್ಮ ತಾಯಿ ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಬೆನ್ನೆಲುಬಾಗಿ ನಿಂತರು ಎಂದು ಆಸಿಯಾ ಭಾವುಕರಾಗಿ ಹೇಳಿದ್ದಾರೆ.

‘ನನ್ನ ಶಕ್ತಿಯಾಗಿದ್ದು ಅಮ್ಮ’

ಬಿಗ್‌ಬಾಸ್‌ ವೇದಿಕೆಯಲ್ಲಿ ತಾಯಿಯ ಬಗ್ಗೆ ಮಾತನಾಡುವಾಗ ಆಸಿಯಾ ಭಾವುಕರಾದರು. ತಮಗೆ ಅಮ್ಮ ತುಂಬಾ ಕ್ಲೋಸ್‌ ಎಂದು ಹೇಳಿದ ಅವರು, ನಟನೆ ಕನಸನ್ನು ಕುಟುಂಬದಲ್ಲಿ ಯಾರೂ ಆರಂಭದಲ್ಲಿ ಇಷ್ಟಪಟ್ಟಿರಲಿಲ್ಲ ಎಂದಿದ್ದಾರೆ.

ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು, ಕಷ್ಟದ ಸಮಯದಲ್ಲಿ ತಮ್ಮ ಶಕ್ತಿಯಾಗಿ ನಿಂತಿದ್ದು ಅಮ್ಮ ಎಂದು ಹೇಳಿರುವ ಆಸಿಯಾ, “ನನ್ನನ್ನು ಅರ್ಥ ಮಾಡಿಕೊಂಡಿದ್ದಕ್ಕೆ ಥ್ಯಾಂಕ್ ಯು ಅಮ್ಮಿ” ಎಂದು ಭಾವುಕರಾಗಿ ಹೇಳಿದ್ದಾರೆ.

ಹಲವು ರಿಜೆಕ್ಷನ್‌ಗಳನ್ನು ಎದುರಿಸಿ, ಆಡಿಷನ್‌ಗಳ ಮೂಲಕ ಒಂದೊಂದೇ ಅವಕಾಶ ಪಡೆದು ಕಿರುತೆರೆಯಲ್ಲಿ ತಮ್ಮದೇ ಸ್ಥಾನ ಮಾಡಿಕೊಂಡಿರುವ ಆಸಿಯಾ ಫಿರ್ದೋಸ್‌, ಇದೀಗ ಬಿಗ್‌ಬಾಸ್‌ ಮನೆಯಲ್ಲಿ ಹೇಗೆ ಆಟ ಆಡುತ್ತಾರೆ ಎಂಬುದೇ ಕುತೂಹಲ. ಅವರ ನಿಜವಾದ ವ್ಯಕ್ತಿತ್ವ ಮನೆ ಒಳಗೆ ಹೇಗೆ ಹೊರಬರುತ್ತದೆ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

Leave a Reply

Your email address will not be published. Required fields are marked *