ರಾಕಿಂಗ್ ಸ್ಟಾರ್ ಯಶ್ ಸಂಭಾವನೆ ಬಗ್ಗೆ ಸದಾ ಚರ್ಚೆ ನಡೆಯುತ್ತಲೇ ಇರುತ್ತದೆ. ಒಂದು ಸಿನಿಮಾಕ್ಕೆ 50 ಕೋಟಿ ರೂಪಾಯಿಗೂ ಹೆಚ್ಚು ಪಡೆಯುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ಇದೇ ಪ್ರಶ್ನೆಗೆ ಸ್ವತಃ ಯಶ್ ಉತ್ತರ ನೀಡಿದ್ದು, ತಮ್ಮ ಕೆಲಸ ಮಾಡುವ ವಿಧಾನವನ್ನೂ ಬಹಿರಂಗಪಡಿಸಿದ್ದಾರೆ.
ಇತ್ತೀಚೆಗೆ ಪ್ರಸಾರವಾದ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಸಿನಿಮಾ ಸಂಭಾವನೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನಿರೂಪಕರು “ಒಂದು ಸಿನಿಮಾಕ್ಕೆ 50 ಕೋಟಿ ರೂಪಾಯಿ ಸಂಭಾವನೆ ಕೇಳುತ್ತೀರಂತೆ?” ಎಂದು ಪ್ರಶ್ನಿಸಿದಾಗ, ಯಶ್ ನಗುತ್ತಲೇ “ಇಲ್ಲ, ಅದಕ್ಕಿಂತಲೂ ಹೆಚ್ಚು ಪಡೆಯುತ್ತೇನೆ” ಎಂದು ಉತ್ತರಿಸಿದರು.
ಆದರೆ ತಕ್ಷಣವೇ ಅವರು ತಮ್ಮ ಕೆಲಸದ ವಿಧಾನವನ್ನು ವಿವರಿಸಿದರು. ಸಾಮಾನ್ಯವಾಗಿ ತಾವು ಸಿನಿಮಾಗಳಿಗೆ ನಿಗದಿತ ಸಂಭಾವನೆ ಪಡೆಯುವುದಿಲ್ಲ ಎಂದು ಯಶ್ ಹೇಳಿದರು. ಬದಲಾಗಿ ಸಿನಿಮಾದಲ್ಲಿ ಪಾರ್ಟ್ನರ್ಶಿಪ್ ಮಾದರಿಯಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
“ನಮ್ಮನ್ನು ನಂಬಿ ನಿರ್ಮಾಪಕರು ಹಣ ಹೂಡುತ್ತಾರೆ. ನಾನು ಕೂಡ ಅವರ ಜೊತೆ ಪಾಲುದಾರನಾಗುತ್ತೇನೆ. ಸಿನಿಮಾ ಗೆದ್ದರೆ ಇಬ್ಬರೂ ಗೆಲ್ಲುತ್ತೇವೆ. ಸಿನಿಮಾ ಸೋತರೆ ನಷ್ಟದಲ್ಲೂ ನನ್ನ ಪಾಲಿರುತ್ತದೆ. ಇದೇ ರೀತಿ ನಾನು ‘ಕೆಜಿಎಫ್’ಗಿಂತಲೂ ಮೊದಲಿನಿಂದ ಕೆಲಸ ಮಾಡುತ್ತಿದ್ದೇನೆ” ಎಂದು ಯಶ್ ಹೇಳಿದರು.
ಸಿನಿಮಾ ಹಿಟ್ ಆದಾಗ ಬರುವ ಲಾಭವನ್ನು ಕೇವಲ ಸಂಪಾದನೆಗಾಗಿ ಬಳಸುವುದಿಲ್ಲ ಎಂದೂ ಅವರು ಹೇಳಿದರು. ಆ ಅನುಭವ ಮತ್ತು ಹಣವನ್ನು ಮತ್ತೆ ಉತ್ತಮ ಸಿನಿಮಾಗಳಿಗಾಗಿ ಹೂಡಿಕೆ ಮಾಡಬೇಕು ಎಂಬುದು ತಮ್ಮ ಉದ್ದೇಶ ಎಂದು ಯಶ್ ತಿಳಿಸಿದರು.
ನಟನಾಗಿ ಮಾತ್ರವಲ್ಲ, ಸಿನಿಮಾದ ಭಾಗವಾಗಿಯೇ ಕೆಲಸ ಮಾಡಲು ಇಷ್ಟಪಡುತ್ತೇನೆ. ಅದಕ್ಕಾಗಿ ಸಂಭಾವನೆ ತೆಗೆದುಕೊಳ್ಳುವುದಕ್ಕಿಂತ ಸಹ-ನಿರ್ಮಾಪಕರಾಗಿ ಪಾಲುದಾರನಾಗುವುದು ನನಗೆ ಹೆಚ್ಚು ಇಷ್ಟ ಎಂದು ಯಶ್ ಹೇಳಿದ್ದಾರೆ.
‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ಇದೀಗ ‘ಟಾಕ್ಸಿಕ್’ ಸಿನಿಮಾದ ಮೂಲಕ ಮತ್ತೊಮ್ಮೆ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದ್ದಾರೆ. ಈ ನಡುವೆ ಸಂಭಾವನೆ ಬಗ್ಗೆ ಅವರು ನೀಡಿರುವ ಸ್ಪಷ್ಟನೆ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.