ಉತ್ತರ ಪ್ರದೇಶ: ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಕೈಯಲ್ಲಿ ಕೋಲು ಹಿಡಿದು ಸುತ್ತಮುತ್ತ ನೋಡಬೇಕು. ಯಾವ ಮೂಲೆಯಲ್ಲಿ ಹಾವು ಅಡಗಿದೆಯೋ ಎಂಬ ಭಯ. ಹೀಗೆ ಕಳೆದ ಕೆಲವು ವಾರಗಳಿಂದ ಒಂದು ಕುಟುಂಬ ಆತಂಕದಲ್ಲೇ ಜೀವನ ನಡೆಸುತ್ತಿದೆ.
ಉತ್ತರ ಪ್ರದೇಶದ ಸಂಭಾಲ್ನ ಗಣೇಶಪುರ ಗ್ರಾಮದ ಕುಟುಂಬವೊಂದರಲ್ಲಿ ಕಳೆದ ಒಂದು ತಿಂಗಳಲ್ಲಿ ನಾಲ್ಕು ಬಾರಿ ಹಾವು ಕಡಿತದ ಘಟನೆ ನಡೆದಿದೆ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇನ್ನೊಂದು ವಿಚಿತ್ರ ಸಂಗತಿ ಎಂದರೆ, ಈ ನಾಲ್ಕು ಘಟನೆಗಳೂ ಸತತ ಭಾನುವಾರಗಳಂದೇ ನಡೆದಿವೆ ಎಂದು ಕುಟುಂಬ ಹೇಳಿಕೊಂಡಿದೆ.
ಕುಟುಂಬದ ಪ್ರಕಾರ, ಮೊದಲ ಭಾನುವಾರ ಮನೆಯ ಸದಸ್ಯರೊಬ್ಬರಿಗೆ ಹಾವು ಕಚ್ಚಿದೆ. ನಂತರ ಎರಡನೇ ಭಾನುವಾರ ಮತ್ತೊಬ್ಬರಿಗೆ ಹಾಗೂ ಮೂರನೇ ಭಾನುವಾರವೂ ಹಾವು ಕಡಿತವಾಗಿದೆ. ನಾಲ್ಕನೇ ಭಾನುವಾರವೂ ಇದೇ ಘಟನೆ ಮರುಕಳಿಸಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಘಟನೆಗಳಲ್ಲಿ ಐದು ವರ್ಷದ ಮಗು ಹಾವು ಕಡಿತಕ್ಕೆ ಬಲಿಯಾಗಿದೆ ಎಂದು ಕುಟುಂಬ ಹೇಳಿದೆ. ಇನ್ನುಳಿದ ಕೆಲವರಿಗೆ ಚಿಕಿತ್ಸೆ ನೀಡಲಾಗಿದ್ದು, ಇತ್ತೀಚಿನ ಘಟನೆಯಲ್ಲಿ ಕುಟುಂಬದ ವಿವಾಹಿತ ಮಗಳಿಗೂ ಹಾವು ಕಚ್ಚಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮನೆಗೆ ಹೋಗೋಕೆ ಭಯಪಡುತ್ತಿರುವ ಕುಟುಂಬ
ಪದೇ ಪದೆ ಹಾವು ಕಾಣಿಸಿಕೊಳ್ಳುತ್ತಿರುವುದರಿಂದ ಕುಟುಂಬದ ಸಾಮಾನ್ಯ ಜೀವನವೇ ಬದಲಾಗಿದೆ. ಮನೆಯೊಳಗಿನ ಯಾವುದೇ ಕೋಣೆಗೆ ಹೋಗುವ ಮುನ್ನ ಸದಸ್ಯರು ಕೋಲು ಹಿಡಿದು ಮೂಲೆ ಮೂಲೆ ಪರಿಶೀಲಿಸುತ್ತಿದ್ದಾರೆ.
ಮನೆಯ ಗೋಡೆ, ಹಾಸಿಗೆ, ಸಾಮಾನುಗಳ ಕೆಳಗೆ ಹಾಗೂ ಸುತ್ತಮುತ್ತ ಹಾವು ಅಡಗಿದೆಯೇ ಎಂದು ನೋಡಿದ ಬಳಿಕವೇ ಒಳಗೆ ಹೋಗುತ್ತಿದ್ದಾರೆ. ಒಂದು ಕಡೆ ಮಗುವನ್ನು ಕಳೆದುಕೊಂಡ ನೋವು, ಮತ್ತೊಂದು ಕಡೆ ಮತ್ತೆ ಹಾವು ಕಚ್ಚಬಹುದು ಎಂಬ ಭಯ ಕುಟುಂಬವನ್ನು ಕಾಡುತ್ತಿದೆ.
ಗ್ರಾಮದಲ್ಲೂ ಭಾರೀ ಚರ್ಚೆ
ಸತತ ಭಾನುವಾರಗಳಂದೇ ಹಾವು ಕಡಿತವಾಗುತ್ತಿರುವುದು ಈಗ ಗ್ರಾಮದಲ್ಲೂ ಚರ್ಚೆಯ ವಿಷಯವಾಗಿದೆ. ಇದು ಕೇವಲ ಕಾಕತಾಳೀಯವೇ ಅಥವಾ ಹಾವುಗಳು ಮನೆಯ ಸುತ್ತಮುತ್ತಲೇ ಅಡಗಿಕೊಂಡಿವೆಯೇ ಎಂಬ ಪ್ರಶ್ನೆ ಗ್ರಾಮಸ್ಥರಲ್ಲೂ ಮೂಡಿದೆ.
ಆದರೆ ಸತತವಾಗಿ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಕುಟುಂಬ ಮಾತ್ರ ಪ್ರತಿದಿನ ಆತಂಕದಲ್ಲೇ ಕಾಲ ಕಳೆಯುತ್ತಿದೆ. ಮನೆಯ ಸುತ್ತಮುತ್ತ ಹಾವುಗಳಿರುವ ಸಾಧ್ಯತೆ ಇರುವುದರಿಂದ ಸ್ಥಳೀಯವಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ.