ದರ್ಶನ್ ಪತ್ನಿ ವಿಜಯಲಕ್ಷ್ಮಿ-ಧನ್ವೀರ್ ಜಟಾಪಟಿ ಕೇಸ್‌ಗೆ ಟ್ವಿಸ್ಟ್; 3 ಪ್ರಕರಣಗಳ ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ನಟ ಧನ್ವೀರ್ ನಡುವಿನ ಜಟಾಪಟಿ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಧನ್ವೀರ್ ವಿರುದ್ಧ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ತನಿಖೆಗೆ ಹೈಕೋರ್ಟ್ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಇದರಿಂದ ಪ್ರಕರಣಗಳ ತನಿಖೆ ಮುಂದುವರಿಸಲು ಪೊಲೀಸರಿಗೆ ಅವಕಾಶ ಸಿಕ್ಕಿದೆ.

ಮೂರು ಪ್ರಕರಣಗಳ ತನಿಖೆಗೆ ತಡೆಯಾಜ್ಞೆ ತಂದಿದ್ದ ಧನ್ವೀರ್

ಧನ್ವೀರ್ ವಿರುದ್ಧ ಬೆಂಗಳೂರಿನಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪ್ರಕರಣಗಳ ತನಿಖೆಗೆ ತಡೆ ನೀಡುವಂತೆ ಕೋರಿ ಧನ್ವೀರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಇದೀಗ ತಡೆಯಾಜ್ಞೆ ತೆರವುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗ್ಡೆ ಅವರ ಪೀಠ ನಡೆಸಿತು.

ಧನ್ವೀರ್ ಪರ ವಕೀಲರ ವಾದವೇನು?

ವಿಚಾರಣೆ ವೇಳೆ ಧನ್ವೀರ್ ಪರ ಹಿರಿಯ ವಕೀಲ ಕೆ.ಎನ್. ಫಣೀಂದ್ರ ವಾದ ಮಂಡಿಸಿದರು. ಧನ್ವೀರ್ ಮನೆಗೆ ಬಂದಿದ್ದವರು ಅವರ ತಂದೆಯನ್ನು ನಿಂದಿಸಿದ್ದಾರೆ. ಆದರೆ, ಧನ್ವೀರ್ ಅವರು ವಿಜಯಲಕ್ಷ್ಮಿ ಅವರನ್ನು ನಿಂದಿಸಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಾಟ್ಸ್‌ಆ್ಯಪ್ ಸಂದೇಶ, ಮೊಬೈಲ್ ಸಂಭಾಷಣೆ ಸಲ್ಲಿಸಿದ ಪೊಲೀಸರು

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಅನೂಪ್ ಕುಮಾರ್, ವಾಟ್ಸ್‌ಆ್ಯಪ್ ಸಂದೇಶಗಳು ಮತ್ತು ಮೊಬೈಲ್ ಸಂಭಾಷಣೆಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ದೂರುದಾರ ನಾಗರಾಜ್ ಅವರಿಗೆ ಬೆದರಿಕೆ ಹಾಕಿರುವುದಕ್ಕೆ ಸಾಕ್ಷ್ಯಗಳಿವೆ. ಅಲ್ಲದೆ, ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳಿಗೆ ಪೂರಕವಾದ ಸಾಕ್ಷ್ಯಾಧಾರಗಳೂ ಇವೆ ಎಂದು ವಾದ ಮಂಡಿಸಿದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ಹೈಕೋರ್ಟ್, ಮೂರು ಪ್ರಕರಣಗಳ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಇದರಿಂದ ಧನ್ವೀರ್ ವಿರುದ್ಧದ ಪ್ರಕರಣಗಳ ತನಿಖೆ ಮುಂದುವರಿಯಲಿದೆ.

Leave a Reply

Your email address will not be published. Required fields are marked *