ನಟ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಅರ್ಜುನ್ ಮತ್ತು ವಿದೇಶಿ ಉದ್ಯಮಿ ಇಸೈಯಾ ನಟ್ಟರ್ ಅವರ ವಿವಾಹ ಅಕ್ಟೋಬರ್ 19, 2026ರಂದು ಇಟಲಿಯ ಟಸ್ಕನಿಯಲ್ಲಿರುವ ಐತಿಹಾಸಿಕ ವಿಲ್ಲಾ ಸೆಟಿನಾಲೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ. ಸುಮಾರು 14 ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಏಪ್ರಿಲ್ 2026ರಲ್ಲಿ ಇಟಲಿಯಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಹಿಂದೂ ಮತ್ತು ಕ್ರಿಶ್ಚಿಯನ್ ಎರಡೂ ಸಂಪ್ರದಾಯಗಳ ಪ್ರಕಾರ ಮದುವೆಯಾಗಿದ್ದಾರೆ. ಮದುವೆಯ ಸಂಭ್ರಮದ ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮೇಘನಾ ರಾಜ್‌ಗೆ ಮದುವೆಯ ಆಹ್ವಾನ ಇರಲಿಲ್ಲ!
ಅರ್ಜುನ್ ಸರ್ಜಾ ಅವರು ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರ ಮಾವ. ಹೀಗಾಗಿ ಕುಟುಂಬದ ಸದಸ್ಯರ ನಡುವಿನ ಸಂಬಂಧದ ಹಿನ್ನೆಲೆಯಲ್ಲಿ ಅಂಜನಾ ಮದುವೆಗೆ ಮೇಘನಾ ರಾಜ್ ಕೂಡ ಆಗಮಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಮದುವೆಯಲ್ಲಿ ಮೇಘನಾ ಕಾಣಿಸಿಕೊಳ್ಳದಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಯೊಬ್ಬರು ಇದೇ ವಿಚಾರವಾಗಿ ಮೇಘನಾ ರಾಜ್ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, “ಮದುವೆಗೆ ನನ್ನನ್ನು ಕರೆದಿರಲಿಲ್ಲ. ಹಾಗಾಗಿ ನಾನು ಹೋಗಿಲ್ಲ. ಧ್ರುವ ಮತ್ತು ಪ್ರೇರಣಾ ಅವರನ್ನು ಕರೆದಿದ್ದರು, ಅವರು ಹೋಗಿದ್ದರು. ಮದುವೆಗೆ ಯಾಕೆ ಕರೆದಿಲ್ಲ ಎಂದು ನನ್ನನ್ನು ಕೇಳಬಾರದು. ಅವರನ್ನೇ ಕೇಳಬೇಕು” ಎಂದು ನೇರವಾಗಿ ಹೇಳಿದ್ದಾರೆ.
ಇದನ್ನೂ ಓದಿ: ‘ಡಿ-ಬಾಸ್’ ಘೋಷಣೆ ಕೂಗಬೇಡಿ; ಅಭಿಮಾನಿಗಳಿಗೆ ಡಿ ಕಂಪನಿ ಎಚ್ಚರಿಕೆ
ಧ್ರುವ ಸರ್ಜಾ ಮದುವೆಯಲ್ಲಿ ಭಾಗಿಯಾಗಿದ್ದರು
ಅಂಜನಾ ಮದುವೆಯಲ್ಲಿ ಧ್ರುವ ಸರ್ಜಾ ಭಾಗಿಯಾಗಿದ್ದರು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳಿಂದ ತಿಳಿದುಬಂದಿತ್ತು. ಆದರೆ ಮೇಘನಾ ರಾಜ್ ಗೈರಾಗಿರುವುದು ಚರ್ಚೆಗೆ ಕಾರಣವಾಗಿತ್ತು. ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರ ಪತಿ ಉಮಾಪತಿ ಮತ್ತು ಅವರ ಕುಟುಂಬದವರು ಮದುವೆಯಲ್ಲಿ ಭಾಗಿಯಾಗಿದ್ದರೇ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಇಲ್ಲ.
ಮದುವೆಗೆ ಅತ್ಯಾಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು ಎನ್ನಲಾಗಿದ್ದು, ಮೇಘನಾ ರಾಜ್ ಅವರನ್ನು ಆಹ್ವಾನಿಸದಿರುವ ವಿಚಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬದ ಆಪ್ತ ಸಂಬಂಧದ ನಡುವೆಯೂ ಆಹ್ವಾನ ನೀಡದಿರಲು ಕಾರಣವೇನು ಎಂಬ ಪ್ರಶ್ನೆಗಳನ್ನು ಕೆಲವರು ಎತ್ತಿದ್ದಾರೆ.
ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ಪ್ರತ್ಯೇಕವಾಗಿ ವಾಸ
ಅರ್ಜುನ್ ಸರ್ಜಾ ಅವರಿಗೆ ತಮ್ಮ ತಂಗಿ ಅಮ್ಮಾಜಿ ಅವರ ಮಕ್ಕಳಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಮೇಲೆ ಅಪಾರ ಪ್ರೀತಿ ಇದೆ. ಈ ಬಗ್ಗೆ ಅವರು ಈ ಹಿಂದೆಯೂ ಮಾತನಾಡಿದ್ದರು. ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ತಮ್ಮ ತಂದೆ-ತಾಯಿಯೊಂದಿಗೆ ವಾಸಿಸುತ್ತಿದ್ದಾರೆ.
ಇನ್ನು, ಅರ್ಜುನ್ ಸರ್ಜಾ ಅವರ ಹಿರಿಯ ಪುತ್ರಿ ಐಶ್ವರ್ಯಾ ಅವರ ವಿವಾಹ 2024ರಲ್ಲಿ ಚೆನ್ನೈನ ಗೇರುಗಂಬಕ್ಕಂನಲ್ಲಿರುವ ಶ್ರೀ ಯೋಗ ಆಂಜನೇಯ ದೇವಸ್ಥಾನದಲ್ಲಿ ನಡೆದಿತ್ತು. ಆ ಮದುವೆಗೆ ಮೇಘನಾ ರಾಜ್ ಸೇರಿದಂತೆ ಹಲವು ಗಣ್ಯರಿಗೆ ಆಹ್ವಾನ ನೀಡಲಾಗಿತ್ತು.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಬುಲೆಟ್‌ಪ್ರೂಫ್ ಗ್ಲಾಸ್ ಹಿಂದೆ ನಿಂತು ಅಭಿಮಾನಿಗಳಿಗೆ ದರ್ಶನ!
ಅಂಜನಾ ಮತ್ತು ಇಸೈಯಾ ಅವರದ್ದು ಅಂತರ್‌ಧರ್ಮೀಯ ವಿವಾಹ
ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿ ಅಂಜನಾ ಹಿಂದೂ ಧರ್ಮದವರಾಗಿದ್ದು, ಇಸೈಯಾ ನಟ್ಟರ್ ಕ್ರಿಶ್ಚಿಯನ್ ಧರ್ಮದವರು. ಹೈಸ್ಕೂಲ್ ದಿನಗಳಿಂದಲೇ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇದೀಗ ಎರಡೂ ಧರ್ಮಗಳ ಸಂಪ್ರದಾಯದಂತೆ ವಿವಾಹವಾಗಿದ್ದಾರೆ.
One thought on “ಅರ್ಜುನ್ ಸರ್ಜಾ ಮಗಳ ಮದುವೆಗೆ ಮೇಘನಾ ರಾಜ್‌ಗೆ ಹೋಗಿಲ್ಲವೇಕೆ? ನಟಿ ಕೊಟ್ಟ ಉತ್ತರವೇನು?”