Russia Ukraine War: ರಷ್ಯಾ ಡ್ರೋನ್‌ ದಾಳಿಗೆ ಉಕ್ರೇನ್‌ ತತ್ತರ; 27 ಬಲಿ, 42 ಮಂದಿಗೆ ಗಾಯ

ಕೀವ್: ಉಕ್ರೇನ್‌ನ ರಾಜಧಾನಿ ಕೀವ್‌ (Russia Ukraine War) ಮೇಲೆ ರಷ್ಯಾ ನಡೆಸಿದ ಭೀಕರ ಡ್ರೋನ್‌ ದಾಳಿಯಿಂದಾಗಿ ಕನಿಷ್ಠ 27 ಮಂದಿ ಸಾವನ್ನಪ್ಪಿದ್ದು, 42 ಜನರು ಗಾಯಗೊಂಡಿದ್ದಾರೆ. ರಾತ್ರಿ ಪೂರ್ತಿ ನಡೆದ ದಾಳಿಯಿಂದ ಹಲವು ಪ್ರದೇಶಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ದಾಳಿಯ ತೀವ್ರತೆಗೆ ಕನಿಷ್ಠ 50 ವಸತಿ ಕಟ್ಟಡಗಳು ಹಾನಿಗೊಳಗಾಗಿವೆ. ಹಲವು ಮನೆಗಳು ಮತ್ತು ರೆಸ್ಟೋರೆಂಟ್‌ಗಳಿಗೆ ಬೆಂಕಿ ಹೊತ್ತಿಕೊಂಡಿದೆ. ದಾಳಿಗೊಳಗಾದ ಬುಚಾ ಜಿಲ್ಲೆಯ ಪ್ರದೇಶದಿಂದ 380ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗವರ್ನರ್ ಟೈಮೂರ್ ಟ್ಕಾಚೆಂಕೊ ತಿಳಿಸಿದ್ದಾರೆ.

ರಷ್ಯಾದ ಡ್ರೋನ್‌ ದಾಳಿಯಿಂದ ವಸತಿ ಕಟ್ಟಡಗಳು ಮಾತ್ರವಲ್ಲದೆ ಮೂಲಸೌಕರ್ಯ, ಗೋದಾಮುಗಳು ಮತ್ತು ವೃದ್ಧರ ಆರೈಕೆ ಕೇಂದ್ರಗಳಿಗೂ ಹಾನಿಯಾಗಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

ಈ ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ದಾಳಿಯಿಂದ ಉಂಟಾದ ಹಾನಿಗೆ ಕಾರಣರಾದವರು ಹಾಗೂ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ಕೀವ್ ನಿರಂತರ ವೈಮಾನಿಕ ದಾಳಿಗಳನ್ನು ಎದುರಿಸುತ್ತಿದೆ. ಪದೇಪದೇ ನಡೆಯುತ್ತಿರುವ ದಾಳಿಗಳಿಂದ ರಾಜಧಾನಿಯ ಆರ್ಥಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿದೆ. ಸಾಮಾನ್ಯ ಜನರ ಜೀವನ ಕೂಡ ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.

ರಾತ್ರಿ ವೇಳೆ ನಡೆದ ಡ್ರೋನ್‌ ದಾಳಿಯಿಂದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಮುಂದಾಗಿದ್ದು, ಹಲವು ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸದ್ಯ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಹಾನಿಗೊಳಗಾದ ಪ್ರದೇಶಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *