ಫೇಮಸ್‌ ನಟಿಯಾಗಿದ್ರೂ 20 ವರ್ಷ ಕನ್ನಡಿಯನ್ನೇ ನೋಡದ ಸುಂದರಿ.. ಯಾರೀಕೆ ಗೊತ್ತಾ?

ಬಾಲಿವುಡ್‌ನಲ್ಲಿ ತಮ್ಮ ನೈಸರ್ಗಿಕ ಸೌಂದರ್ಯ ಮತ್ತು ಸರಳತೆಗೆ ಹೆಸರಾಗಿರುವ ನಟಿ ದಿಯಾ ಮಿರ್ಜಾ ಇದೀಗ ತಮ್ಮ ಒಂದು ವಿಭಿನ್ನ ಅಭ್ಯಾಸದಿಂದ ಸುದ್ದಿಯಾಗಿದ್ದಾರೆ. ಬರೋಬ್ಬರಿ 20 ವರ್ಷಗಳಿಂದ ಶೂಟಿಂಗ್ ಸೆಟ್‌ನಲ್ಲಿ ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ನೋಡಿಕೊಳ್ಳುವುದಿಲ್ಲವಂತೆ.

‘ರೆಹನಾ ಹೈ ತೇರೆ ದಿಲ್ ಮೇ’ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ದಿಯಾ ಮಿರ್ಜಾ, ಬಳಿಕ ಹಲವು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ನಟನೆ ಜೊತೆಗೆ ಅವರ ನೈಸರ್ಗಿಕ ಸೌಂದರ್ಯವೂ ಬಾಲಿವುಡ್‌ನಲ್ಲಿ ಸದಾ ಚರ್ಚೆಯಲ್ಲಿದೆ.

ಆದರೆ ಇಷ್ಟು ವರ್ಷಗಳ ಸಿನಿ ಪ್ರಯಾಣದಲ್ಲೂ ದಿಯಾ ತಮ್ಮ ಲುಕ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಶೂಟಿಂಗ್ ವೇಳೆ ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವುದಿಲ್ಲ. ಅಷ್ಟೇ ಅಲ್ಲ, ಶಾಟ್ ಮುಗಿದ ಬಳಿಕ ಮಾನಿಟರ್‌ನಲ್ಲಿ ತಮ್ಮ ಅಭಿನಯವನ್ನು ನೋಡುವ ಅಭ್ಯಾಸವೂ ಇಲ್ಲ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನೋಟಕ್ಕಿಂತ ಪಾತ್ರ ಮುಖ್ಯ ಎಂದ ದಿಯಾ
‘ಟೈಮ್ಸ್ ನೌ’ಗೆ ನೀಡಿದ ಸಂದರ್ಶನದಲ್ಲಿ ದಿಯಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಕ್ಯಾಮೆರಾ ಮುಂದೆ ತಾವು ಹೇಗೆ ಕಾಣುತ್ತಿದ್ದೇವೆ ಎನ್ನುವುದಕ್ಕಿಂತ, ತಾವು ನಿರ್ವಹಿಸುತ್ತಿರುವ ಪಾತ್ರ ಮತ್ತು ನಟನೆಯ ಮೇಲೆ ಗಮನ ಕೊಡುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

ಸಾಮಾನ್ಯವಾಗಿ ಹಲವು ನಟ-ನಟಿಯರು ಶಾಟ್ ಮುಗಿದ ಕೂಡಲೇ ಮಾನಿಟರ್‌ನಲ್ಲಿ ತಮ್ಮ ಅಭಿನಯ, ಸನ್ನೆಗಳು ಮತ್ತು ಲುಕ್ ಹೇಗಿದೆ ಎಂದು ಪರಿಶೀಲಿಸುತ್ತಾರೆ. ಆದರೆ ದಿಯಾ ಮಾತ್ರ ಇದರಿಂದ ದೂರವಿರುತ್ತಾರೆ.

ತಮ್ಮ ವೃತ್ತಿಜೀವನದ ಆರಂಭದಲ್ಲೇ ನಿರಂತರವಾಗಿ ತಮ್ಮ ನೋಟದ ಬಗ್ಗೆ ಗಮನ ಹರಿಸುವುದು ಮಾನಸಿಕ ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತುಕೊಂಡಿದ್ದಾಗಿ ದಿಯಾ ಹೇಳಿದ್ದಾರೆ.

ಸದ್ಯ ದಿಯಾ ಅವರ ಈ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿವೆ. ಗ್ಲಾಮರ್ ಲೋಕದಲ್ಲಿದ್ದರೂ ತಮ್ಮ ಸೌಂದರ್ಯಕ್ಕಿಂತ ನಟನೆ ಮತ್ತು ಪಾತ್ರಕ್ಕೆ ಆದ್ಯತೆ ನೀಡುತ್ತಿರುವ ದಿಯಾ ಅವರ ಈ ಸರಳ ವಿಧಾನ ಅಭಿಮಾನಿಗಳ ಗಮನ ಸೆಳೆದಿದೆ.

Leave a Reply

Your email address will not be published. Required fields are marked *