ಅಂಧಭಕ್ತೆ ಎಂದು ಕರೆಸಿಕೊಳ್ಳಲು ಹೆಮ್ಮೆ ಎಂದ ಸೂರ್ಯವಂಶಿ ನಟಿ ಇಶಾ; ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ

ಮುಂಬೈ: ‘ಸೂರ್ಯವಂಶ’ ಸಿನಿಮಾದಲ್ಲಿ ವಿಷ್ಣುವರ್ಧನ್‌ ಜೊತೆ ನಟಿಸಿ ಕನ್ನಡಿಗರಿಗೂ ಪರಿಚಿತರಾಗಿರುವ ನಟಿ ಇಶಾ ಕೊಪ್ಪಿಕರ್‌ ಇದೀಗ ತಮ್ಮ ಹೇಳಿಕೆಯೊಂದರಿಂದ ಸುದ್ದಿಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ‘ನಾನು ಹೆಮ್ಮೆಯ ಅಂಧಭಕ್ತೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.

ವಿಡಿಯೋದಲ್ಲಿ ಮಾತನಾಡಿರುವ ಇಶಾ, ದೇಶವನ್ನು ಪ್ರೀತಿಸುವುದು ಮತ್ತು ದೇಶ ಅಭಿವೃದ್ಧಿಯಾಗುವುದನ್ನು ನೋಡಿ ಹೆಮ್ಮೆಪಡುವುದೇ ಭಕ್ತಿ ಎಂದಾದರೆ, ತಾನು ದೇಶದ ಭಕ್ತೆ ಎಂದು ಹೇಳಿದ್ದಾರೆ. ‘ಅಂಧಭಕ್ತೆ’ ಎಂದು ಕರೆಸಿಕೊಳ್ಳುವುದಕ್ಕೂ ನನಗೆ ಯಾವುದೇ ಮುಜುಗರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ತಮ್ಮ ಈ ಭಕ್ತಿ ಯಾವುದೇ ರಾಜಕೀಯ ಪಕ್ಷದ ಮೇಲಲ್ಲ, ದೇಶದ ಮೇಲೆ ಎಂದು ಇಶಾ ಹೇಳಿದ್ದಾರೆ. ಸರ್ಕಾರದ ನೀತಿಗಳನ್ನು ಪ್ರಶ್ನಿಸಬಹುದು, ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಹೊಂದಬಹುದು. ಆದರೂ ದೇಶವನ್ನು ಪೂರ್ಣ ಮನಸ್ಸಿನಿಂದ ಪ್ರೀತಿಸುತ್ತೇನೆ. ನನಗೆ ದೇಶವೇ ಮೊದಲು ಎಂದು ಹೇಳಿದ್ದಾರೆ.

ಇನ್ನು ದೇಶ ನಮಗೆ ಏನು ಮಾಡಿದೆ ಎಂದು ಪ್ರಶ್ನಿಸುವ ಬದಲು, ನಾವು ದೇಶಕ್ಕೆ ಏನು ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಯೋಚಿಸಬೇಕು ಎಂದು ಇಶಾ ಹೇಳಿದ್ದಾರೆ. ಭಾರತ ವೇಗವಾಗಿ ಬದಲಾಗುತ್ತಿದೆ. ಹೊಸ ಭಾರತ ನಿರ್ಮಾಣವಾಗಬೇಕಾದರೆ ನಮ್ಮ ಆಲೋಚನೆಗಳಲ್ಲೂ ಬದಲಾವಣೆ ಬೇಕು ಎಂದು ಹೇಳಿದ್ದಾರೆ.

‘ನನ್ನನ್ನು ಭಕ್ತೆ ಎನ್ನಿ, ಅಂಧಭಕ್ತೆ ಎನ್ನಿ ಅಥವಾ ರಾಷ್ಟ್ರವಾದಿ ಎನ್ನಿ. ನಾನು ಭಾರತೀಯಳು, ನನ್ನ ದೇಶವನ್ನು ಪ್ರೀತಿಸುತ್ತೇನೆ’ ಎಂದು ಇಶಾ ತಮ್ಮ ಮಾತಿನಲ್ಲಿ ಹೇಳಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನ ಕ್ಯಾಪ್ಷನ್‌ನಲ್ಲೂ ಇದೇ ವಿಚಾರವನ್ನು ಹಂಚಿಕೊಂಡಿದ್ದಾರೆ. ಭಾರತವನ್ನು ಪ್ರೀತಿಸುವುದೇ ‘ಅಂಧಭಕ್ತಿ’ ಎಂದಾದರೆ, ಆ ಹೆಸರನ್ನು ಹೆಮ್ಮೆಯಿಂದ ಸ್ವೀಕರಿಸುತ್ತೇನೆ. ತಪ್ಪು ಅನಿಸಿದ ವಿಚಾರವನ್ನು ಪ್ರಶ್ನಿಸುವ ಹಾಗೂ ಸರಿ ಅನಿಸಿದ ವಿಚಾರವನ್ನು ಮೆಚ್ಚುವ ಹಕ್ಕು ನನಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ನನ್ನ ದೇಶವೇ ಮೊದಲು ಎಂದು ಬರೆದುಕೊಂಡಿದ್ದಾರೆ.

ಇಶಾ ಅವರ ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಅವರ ಮಾತನ್ನು ಬೆಂಬಲಿಸಿದ್ದರೆ, ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡಿಗರಿಗೆ ಇಶಾ ಕೊಪ್ಪಿಕರ್‌ ಎಂದರೆ ‘ಸೂರ್ಯವಂಶ’ ಸಿನಿಮಾದ ನೆನಪು ಸಹಜ. ವಿಷ್ಣುವರ್ಧನ್‌ ಅಭಿನಯದ ಈ ಸಿನಿಮಾದಲ್ಲಿ ನಟಿಸಿದ್ದ ಅವರು ಕನ್ನಡ ಸಿನಿಪ್ರೇಕ್ಷಕರ ಗಮನ ಸೆಳೆದಿದ್ದರು. ಬಳಿಕ ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮರಾಠಿ ಸಿನಿಮಾಗಳಲ್ಲೂ ನಟಿಸಿ ಜನಪ್ರಿಯತೆ ಪಡೆದಿದ್ದಾರೆ.

Leave a Reply

Your email address will not be published. Required fields are marked *