ಮೈಸೂರು ದಸರಾ ಜಂಬೂಸವಾರಿಗೆ ಸ್ಯಾಂಡಲ್‌ವುಡ್ ಮೆರುಗು; 30 ಸ್ಟಾರ್‌ಗಳಿಗೆ ಆಹ್ವಾನ!

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2026ಕ್ಕೆ ದಿನಗಣನೆ ಶುರುವಾಗಿದೆ. ಈ ಬಾರಿ ಜಂಬೂಸವಾರಿಗೆ ಕನ್ನಡ ಚಿತ್ರರಂಗದ ತಾರೆಯರನ್ನೂ ಕರೆತರುವ ಪ್ಲ್ಯಾನ್ ನಡೆದಿದೆ. ಸ್ಯಾಂಡಲ್‌ವುಡ್‌ನ ಸುಮಾರು 30 ಪ್ರಮುಖ ನಟ-ನಟಿಯರಿಗೆ ದಸರಾ ಸಮಿತಿ ವಿಶೇಷ ಆಹ್ವಾನ ನೀಡಲು ಸಿದ್ಧವಾಗಿದೆ.

ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ನಡೆಯುವ ಜಂಬೂಸವಾರಿಯಲ್ಲಿ ತಾರೆಯರು ತೆರೆದ ಅಂಬಾರಿ ಬಸ್‌ನಲ್ಲಿ ಸಾಗಲಿದ್ದಾರೆ ಎನ್ನಲಾಗಿದೆ. ಈ ಮೂಲಕ ದಸರಾ ಮೆರವಣಿಗೆಗೆ ಸಿನಿಮಾ ಸ್ಟಾರ್‌ಗಳ ಉಪಸ್ಥಿತಿ ಮತ್ತಷ್ಟು ಮೆರುಗು ನೀಡಲಿದೆ.

ಈ ಪಟ್ಟಿಯಲ್ಲಿ ಯಶ್, ಶಿವರಾಜ್‌ಕುಮಾರ್, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಮತ್ತು ರವಿಚಂದ್ರನ್ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರ ಹೆಸರುಗಳಿವೆ. ಇವರಿಗೆ ದಸರಾ ಸಮಿತಿಯಿಂದ ಆಹ್ವಾನ ಹೋಗಲಿದ್ದು, ಯಾರೆಲ್ಲ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಅನ್ನೋದು ಮುಂದೆ ಗೊತ್ತಾಗಲಿದೆ.

ನಟಿಯರಿಗೂ ಈ ಬಾರಿ ವಿಶೇಷ ಪ್ರಾತಿನಿಧ್ಯ ಸಿಗಲಿದೆ. ಉಮಾಶ್ರೀ, ರಚಿತಾ ರಾಮ್, ರುಕ್ಮಿಣಿ ವಸಂತ್ ಮತ್ತು ಸಪ್ತಮಿ ಗೌಡ ಸೇರಿದಂತೆ ಜನಪ್ರಿಯ ನಟಿಯರಿಗೂ ಆಹ್ವಾನ ನೀಡಲು ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ 93 ವರ್ಷಗಳ ಪಯಣವನ್ನು ತೋರಿಸುವ ವಿಶೇಷ ಸ್ತಬ್ಧಚಿತ್ರ ಕೂಡ ಪ್ರಮುಖ ಆಕರ್ಷಣೆಯಾಗಲಿದೆ. 1934ರ ಕಪ್ಪು-ಬಿಳುಪು ಸಿನಿಮಾಗಳ ಕಾಲದಿಂದ ಇಂದಿನ ಮಲ್ಟಿಪ್ಲೆಕ್ಸ್ ಹಾಗೂ ಪ್ಯಾನ್-ಇಂಡಿಯಾ ಸಿನಿಮಾಗಳವರೆಗಿನ ಸ್ಯಾಂಡಲ್‌ವುಡ್‌ನ ಬೆಳವಣಿಗೆಯನ್ನು ಇದರಲ್ಲಿ ತೋರಿಸಲಾಗುತ್ತದೆ.

ಕನ್ನಡ ಚಿತ್ರರಂಗದ ದಿಗ್ಗಜರಾದ ಡಾ. ರಾಜ್‌ಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಶ್ ಮತ್ತು ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ವಿಶೇಷ ಶ್ರದ್ಧಾಂಜಲಿ ಸ್ತಬ್ಧಚಿತ್ರ ಕೂಡ ಇರಲಿದೆ ಎನ್ನಲಾಗಿದೆ.

ಹೀಗಾಗಿ ಈ ಬಾರಿ ಮೈಸೂರು ದಸರಾ ಜಂಬೂಸವಾರಿಯಲ್ಲಿ ಆನೆಗಳ ಗಾಂಭೀರ್ಯದ ಜೊತೆಗೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಜಲಕ್ ಕೂಡ ಸಿಗುವ ಸಾಧ್ಯತೆ ಇದೆ. ತಾರೆಯರು ನಿಜವಾಗಿಯೂ ಮೆರವಣಿಗೆಯಲ್ಲಿ ಭಾಗವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *