ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತೆ ಜೈಲು ಸೇರಿ ಆಗಸ್ಟ್ 14ಕ್ಕೆ ಒಂದು ವರ್ಷವಾಗಲಿದೆ. ಈ ನಡುವೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪತಿ ದರ್ಶನ್ ಅವರನ್ನು ನೆನೆದು ಸಾಮಾಜಿಕ ಜಾಲತಾಣದಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
‘ಒಂದು ವರ್ಷ ಕಳೆದಿದೆ, ಆದರೂ ಗಾಯ ಇನ್ನೂ ವಾಸಿಯಾಗಿಲ್ಲ’ ಎಂದು ವಿಜಯಲಕ್ಷ್ಮಿ ಬರೆದುಕೊಂಡಿದ್ದಾರೆ. ಅರ್ಥಮಾಡಿಕೊಳ್ಳಲಾಗದ ವಿಚಾರವನ್ನು ಜಗತ್ತು ತಮ್ಮದೇ ರೀತಿಯಲ್ಲಿ ತೀರ್ಮಾನಿಸಬಹುದು. ಆದರೆ ಈಗ ಯಾರಿಗೂ ವಿವರಣೆ ನೀಡುವುದನ್ನು ನಿಲ್ಲಿಸಿದ್ದೇನೆ. ಸುಮ್ಮನೆ ನಗುತ್ತೇನೆ. ಉಳಿದದ್ದನ್ನು ಕಾಲಕ್ಕೂ, ದೇವರಿಗೂ ಬಿಟ್ಟಿದ್ದೇನೆ ಎಂಬರ್ಥದಲ್ಲಿ ಅವರು ಪೋಸ್ಟ್ ಮಾಡಿದ್ದಾರೆ.
ದರ್ಶನ್ ಜೈಲು ಸೇರಿ ಒಂದು ವರ್ಷ
2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದರ್ಶನ್ ಅವರಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಿತ್ತು. ಬಳಿಕ ಪೊಲೀಸರು ದರ್ಶನ್ ಅವರನ್ನು ಅವರ ಮನೆಯಿಂದಲೇ ವಶಕ್ಕೆ ಪಡೆದು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದರು.
ಇದೀಗ ಈ ಘಟನೆ ನಡೆದು ಸುಮಾರು ಒಂದು ವರ್ಷವಾಗುತ್ತಿದೆ. ಆದರೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಇನ್ನೂ ಕಾನೂನು ಸಂಕಷ್ಟ ಮುಂದುವರಿದಿದೆ.
ಮಾಫಿ ಸಾಕ್ಷಿ ವಿಚಾರದಲ್ಲಿ ಮತ್ತೊಂದು ತಿರುವು
ಇದರ ನಡುವೆ ಪ್ರಕರಣದಲ್ಲಿ ಆರೋಪಿ ಆಗಿರುವ ಪ್ರದೂಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ದರ್ಶನ್ ಪಾಲಿಗೆ ಮತ್ತೊಂದು ಸವಾಲಾಗಿದೆ. ರೇಣುಕಾಸ್ವಾಮಿ ಕೊಲೆಯಾದ ದಿನದ ಹಲವು ಘಟನೆಗಳಿಗೆ ಪ್ರದೂಷ್ ಸಾಕ್ಷಿಯಾಗಿದ್ದಾನೆ ಎಂದು ತನಿಖೆಯಲ್ಲಿ ಹೇಳಲಾಗಿದೆ.
ಮಾಫಿ ಸಾಕ್ಷಿಯಾಗಿ ಪರಿಗಣಿಸುವ ವಿಚಾರದಲ್ಲಿ ದರ್ಶನ್ ಪರ ವಕೀಲರಿಗೆ ವಾದಿಸಲು ಅವಕಾಶ ನೀಡದಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಕೆಳ ನ್ಯಾಯಾಲಯದ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್ ನಿರಾಕರಿಸಿದ್ದು, ದರ್ಶನ್ ಪರ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.
ವಿಚಾರಣೆಗೆ ತಡವಾಗಿ ಬಂದ ಪವಿತ್ರಾ ಗೌಡ
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಮುಂದುವರಿದಿದ್ದು, ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇಂದಿನ ವಿಚಾರಣೆಗೆ ದರ್ಶನ್ ಸೇರಿದಂತೆ ಹಲವು ಆರೋಪಿಗಳು ಹಾಜರಾಗಿದ್ದರು.
ಆದರೆ ಪವಿತ್ರಾ ಗೌಡ ವಿಚಾರಣೆಗೆ ತಡವಾಗಿ ಹಾಜರಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಒಂದೆಡೆ ಪ್ರಕರಣದ ಕಾನೂನು ಹೋರಾಟ ಮುಂದುವರಿದಿದ್ದರೆ, ಮತ್ತೊಂದೆಡೆ ದರ್ಶನ್ ಅವರನ್ನು ನೆನೆದು ವಿಜಯಲಕ್ಷ್ಮಿ ಹಾಕಿರುವ ಭಾವುಕ ಪೋಸ್ಟ್ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.