ಚೆನ್ನೈ: ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ಇದೀಗ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಅಪ್ಪನಂತೆ ನಟನಾಗುವ ಬದಲು, ನಿರ್ದೇಶಕರಾಗಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿರುವ ಜೇಸನ್, ತಮ್ಮ ಸಿನಿಮಾ ಕನಸಿಗೆ ತಂದೆ ನೀಡಿದ ಬೆಂಬಲವನ್ನು ನೆನಪಿಸಿಕೊಂಡಿದ್ದಾರೆ.
ಸಂದೀಪ್ ಕಿಶನ್ ಅಭಿನಯದ ‘ಸಿಗ್ಮಾ’ ಚಿತ್ರದ ಮೂಲಕ 25ನೇ ವಯಸ್ಸಿಗೆ ಜೇಸನ್ ಸಂಜಯ್ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಇತ್ತೀಚೆಗೆ ತೆಲುಗು ನಿರೂಪಕಿ ಸುಮಾ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ ತಮ್ಮ ಸಿನಿಮಾ ಜರ್ನಿ ಮತ್ತು ತಂದೆಯ ಬೆಂಬಲದ ಬಗ್ಗೆ ಅವರು ಮಾತನಾಡಿದ್ದಾರೆ.
ಚಿಕ್ಕ ವಯಸ್ಸಿನಿಂದಲೇ ತಂದೆ ವಿಜಯ್ ಅವರ ಜೊತೆ ಸಿನಿಮಾ ಸೆಟ್‌ಗಳಿಗೆ ಹೋಗುತ್ತಿದ್ದರಿಂದ ಸಿನಿಮಾ ವಾತಾವರಣ ತಮಗೆ ಹೊಸದಲ್ಲ ಎಂದು ಜೇಸನ್ ಹೇಳಿದ್ದಾರೆ. ಸ್ನೇಹಿತರು ಸಿನಿಮಾವನ್ನು ಕೇವಲ ಮನರಂಜನೆಯಾಗಿ ನೋಡುತ್ತಿದ್ದರೆ, ತಾವು ಚಿಕ್ಕ ವಯಸ್ಸಿನಿಂದಲೇ ಸಿನಿಮಾ ನಿರ್ಮಾಣದ ಹಿಂದಿನ ಕೆಲಸಗಳನ್ನು ಹತ್ತಿರದಿಂದ ನೋಡುತ್ತಿದ್ದೆ ಎಂದು ತಿಳಿಸಿದ್ದಾರೆ.
ಆದರೆ ಸಿನಿಮಾ ನಿರ್ಮಾಣದ ಬಗ್ಗೆ ಕೋರ್ಸ್ ಮಾಡಲು ವಿದೇಶಕ್ಕೆ ಹೋಗಬೇಕು ಎಂದು ತಂದೆಯ ಬಳಿ ಹೇಳಿದಾಗ ವಿಜಯ್ ಯಾವುದೇ ಹಿಂಜರಿಕೆ ತೋರಿಸಲಿಲ್ಲವಂತೆ. ಬದಲಿಗೆ, ತಮ್ಮ ನಿರ್ಧಾರಕ್ಕೆ ಮೊದಲು ಗ್ರೀನ್ ಸಿಗ್ನಲ್ ಕೊಟ್ಟವರೇ ತಂದೆ ಎಂದು ಜೇಸನ್ ಹೇಳಿದ್ದಾರೆ.
“ನೀನು ಹೋಗಿ ಕೋರ್ಸ್ ಮಾಡು. ಆಗ ನಿನಗೆ ನಿಜವಾಗಿಯೂ ಏನು ಇಷ್ಟ, ಈ ವೃತ್ತಿ ನಿನಗೆ ಸೂಟ್ ಆಗುತ್ತಾ ಎಂಬುದು ಗೊತ್ತಾಗುತ್ತದೆ” ಎಂದು ವಿಜಯ್ ಸಲಹೆ ನೀಡಿದ್ದರು ಎಂದು ಜೇಸನ್ ತಿಳಿಸಿದ್ದಾರೆ.
ತಂದೆ ವಿಜಯ್ ಸಿನಿಮಾ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಇರುವುದರಿಂದ, ಚಲನಚಿತ್ರ ನಿರ್ಮಾಣವನ್ನು ವೃತ್ತಿಯಾಗಿ ಆಯ್ಕೆ ಮಾಡುವುದರ ಮಹತ್ವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದರು ಎಂದು ಜೇಸನ್ ಹೇಳಿದ್ದಾರೆ.
ಅಮ್ಮ ಸಂಗೀತಾ ಬಗ್ಗೆ ಜೇಸನ್ ಹೇಳಿದ್ದೇನು?
ತಾಯಿ ಸಂಗೀತಾ ಬಗ್ಗೆಯೂ ಜೇಸನ್ ಮಾತನಾಡಿದ್ದಾರೆ. “ನಮ್ಮಮ್ಮ ಈಗಲೂ ನನ್ನನ್ನು ಮಗುವಿನಂತೆ ನೋಡಿಕೊಳ್ಳುತ್ತಾರೆ” ಎಂದು ಹೇಳಿದ್ದಾರೆ.
ಕೆಲಸ ಆರಂಭಿಸಿದ ಬಳಿಕ ಸಮಯ ಕಡಿಮೆಯಾಗಿದ್ದರೂ, ಸಂಗೀತಾ ನಿರಂತರವಾಗಿ ತಮ್ಮ ಬಗ್ಗೆ ವಿಚಾರಿಸುತ್ತಾರೆ. ಯಾವಾಗಲೂ ತಮ್ಮ ದೊಡ್ಡ ಚಿಯರ್‌ಲೀಡರ್ ಆಗಿದ್ದು, ಪ್ರೋತ್ಸಾಹಿಸುತ್ತಾರೆ ಎಂದು ಜೇಸನ್ ಹೇಳಿದ್ದಾರೆ.
ತಮ್ಮ ಸಿನಿಮಾ ಬಿಡುಗಡೆಯಾದ ಬಳಿಕ ತಾಯಿ ಚಿತ್ರವನ್ನು ನೋಡಿ ನೀಡುವ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿಯೂ ತಿಳಿಸಿದ್ದಾರೆ. ಸಂಗೀತಾ ತಮ್ಮ ಅಭಿಪ್ರಾಯವನ್ನು ಮುಚ್ಚಿಡದೆ ನೇರವಾಗಿ ಹೇಳುತ್ತಾರೆ. ಹೀಗಾಗಿ ಅವರ ಪ್ರತಿಕ್ರಿಯೆ ತಮಗೆ ತುಂಬಾ ಮುಖ್ಯ ಎಂದು ಜೇಸನ್ ಹೇಳಿದ್ದಾರೆ.
ವಿಜಯ್-ಸಂಗೀತಾ ವಿಚ್ಛೇದನ ಅರ್ಜಿ ವಾಪಸ್
ವಿಜಯ್ ಮತ್ತು ಸಂಗೀತಾ ಅವರ ವೈಯಕ್ತಿಕ ಜೀವನವೂ ಇತ್ತೀಚೆಗೆ ಸುದ್ದಿಯಾಗಿತ್ತು. ಸಂಗೀತಾ ಅವರು ವಿಜಯ್ ವಿರುದ್ಧ ಚೆಂಗಲ್ಪಟ್ಟು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಶುಕ್ರವಾರ ಹಿಂತೆಗೆದುಕೊಂಡಿದ್ದಾರೆ.
ಅರ್ಜಿ ಹಿಂಪಡೆದ ಬಳಿಕ ಚೆಂಗಲ್ಪಟ್ಟು ನ್ಯಾಯಾಲಯವು ಪ್ರಕರಣವನ್ನು ಮುಕ್ತಾಯಗೊಳಿಸಿದೆ.