ಬೆಂಗಳೂರು: ಪನ್ನೀರ್ ಹೆಸರಿನಲ್ಲಿ ಮಾರಾಟವಾಗುತ್ತಿರುವ ಅನಲಾಗ್ ಅಥವಾ ಕೃತಕ ಪನ್ನೀರ್ ಬಳಕೆಗೆ ಕರ್ನಾಟಕದಲ್ಲಿ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಆಹಾರ ಸುರಕ್ಷತಾ ಇಲಾಖೆ ಈ ಆದೇಶ ಹೊರಡಿಸಿದೆ.
ರಾಜ್ಯಾದ್ಯಂತ ಪನ್ನೀರ್ ಹೆಸರಿನಲ್ಲಿ ಅನಲಾಗ್ ಪನ್ನೀರ್ ತಯಾರಿಕೆ, ಸಂಗ್ರಹಣೆ, ಪೂರೈಕೆ ಹಾಗೂ ಮಾರಾಟ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಕರ್ನಾಟಕದಲ್ಲಿ ಹಲವು ಪನ್ನೀರ್ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ ಯಾವುದೇ ಕಲಬೆರಕೆ ಕಂಡುಬಂದಿಲ್ಲ ಎಂದು ಇಲಾಖೆ ತಿಳಿಸಿದೆ. ಆದರೂ, ಪನ್ನೀರ್‌ನಲ್ಲಿ ಸಸ್ಯಜನ್ಯ ಎಣ್ಣೆ, ಕೊಬ್ಬು ಅಥವಾ ಇತರೆ ಡೈರಿ ಅಲ್ಲದ ಪದಾರ್ಥಗಳನ್ನು ಬಳಸುವ ಕೃತಕ ಉತ್ಪನ್ನಗಳ ಬಳಕೆಯನ್ನು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತಡೆಯಲು ನಿರ್ಧರಿಸಲಾಗಿದೆ.
ಈ ನಿಷೇಧವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಗದಿಪಡಿಸಿರುವ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರದ ಅನಲಾಗ್ ಅಥವಾ ನಾನ್-ಡೈರಿ ಪನ್ನೀರ್‌ಗೆ ಅನ್ವಯಿಸುತ್ತದೆ.
ಇನ್ನು ಮುಂದೆ ಇಂತಹ ಕೃತಕ ಪನ್ನೀರ್ ಅನ್ನು ಯಾವುದೇ ಆಹಾರ ಉತ್ಪನ್ನ ತಯಾರಿಕೆಯಲ್ಲಿ ಬಳಸುವುದು, ಸಂಗ್ರಹಿಸುವುದು, ಪೂರೈಸುವುದು ಅಥವಾ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಆಹಾರ ಸುರಕ್ಷತಾ ನಿಯಮಗಳಡಿ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.