ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ ಮತ್ತೆ ಹಿನ್ನಡೆಯಾಗಿದೆ. ಪ್ರಕರಣದ ವಿಚಾರಣೆ ವೇಳೆ ಖುದ್ದಾಗಿ ನ್ಯಾಯಾಲಯಕ್ಕೆ ಹಾಜರಾಗಲು ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ. ಭದ್ರತಾ ಕಾರಣಗಳಿಂದ ವಿಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ದರ್ಶನ್ ಪರ ವಕೀಲರು ವಿಚಾರಣಾ ಪ್ರಕ್ರಿಯೆ ವೇಳೆ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ, ದರ್ಶನ್‌ರನ್ನು ನ್ಯಾಯಾಲಯಕ್ಕೆ ಕರೆತಂದರೆ ಭದ್ರತಾ ಸಮಸ್ಯೆ ಎದುರಾಗಬಹುದು. ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆಯೂ ಕಷ್ಟವಾಗಲಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪಿ. ಪ್ರಸನ್ನಕುಮಾರ್ ವಾದಿಸಿದ್ದರು.
ಈ ವಾದವನ್ನು ಪರಿಗಣಿಸಿದ ನ್ಯಾಯಾಲಯ ದರ್ಶನ್ ಅವರ ಮನವಿಯನ್ನು ತಿರಸ್ಕರಿಸಿದೆ. ಆದರೆ, ಜೈಲಿನಲ್ಲಿರುವ ದರ್ಶನ್‌ರನ್ನು ಅವರ ವಕೀಲರು ಅಗತ್ಯವಿರುವಷ್ಟು ಸಮಯ ಭೇಟಿ ಮಾಡಿ ಕಾನೂನು ವಿಚಾರಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಲಾಗಿದೆ. ಅಗತ್ಯವಿದ್ದರೆ ವಿಡಿಯೊ ಕಾನ್ಫರೆನ್ಸ್ ಮೂಲಕವೂ ಮಾತನಾಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಇಂದು ಪ್ರದೂಷ್ ವಿಚಾರಣೆ
ಇದೇ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವ 14ನೇ ಆರೋಪಿ ಪ್ರದೂಷ್ ರಾವ್ ಅವರ ವಿಚಾರಣೆ ಇಂದು ನಡೆಯಲಿದೆ. ಪ್ರದೂಷ್ ಅವರನ್ನು ನ್ಯಾಯಾಲಯವು ವಿಡಿಯೊ ಕಾನ್ಫರೆನ್ಸ್ ಮೂಲಕ ಖುದ್ದಾಗಿ ವಿಚಾರಣೆ ನಡೆಸಲಿದೆ.
ಮತ್ತೊಂದೆಡೆ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಮತ್ತು ಪೆನ್‌ಡ್ರೈವ್ ಪತ್ತೆಯಾದ ಘಟನೆ ಕೂಡ ಚರ್ಚೆಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್‌ಕುಮಾರ್ ಜೈಲಿಗೆ ಭೇಟಿ ನೀಡಿ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸಭೆ ನಡೆಸಿದ್ದಾರೆ.
ಪ್ರಮುಖ ಕೈದಿಗಳ ಬ್ಯಾರಕ್‌ಗಳನ್ನೂ ಡಿಜಿಪಿ ಪರಿಶೀಲಿಸಿದ್ದಾರೆ. ಸಜಾ ಕೈದಿ ಪ್ರಜ್ವಲ್ ರೇವಣ್ಣ ಹಾಗೂ ನಟ ದರ್ಶನ್ ಸೇರಿದಂತೆ ಪ್ರಮುಖ ಕೈದಿಗಳ ಬ್ಯಾರಕ್‌ಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಜೈಲಿನ ನಿಯಮ ಉಲ್ಲಂಘಿಸಿ ಮೊಬೈಲ್ ಸೇರಿದಂತೆ ಅಕ್ರಮ ಸೌಲಭ್ಯ ಪಡೆಯದಂತೆ ಕೈದಿಗಳಿಗೆ ಎಚ್ಚರಿಕೆ ನೀಡಲಾಗಿದೆ.
ಜೈಲು ಸಿಬ್ಬಂದಿಯ ಸಹಕಾರವಿಲ್ಲದೆ ಮೊಬೈಲ್ ಮತ್ತು ಇತರ ವಸ್ತುಗಳು ಒಳಗೆ ಹೋಗುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನೂ ಡಿಜಿಪಿ ಅಧಿಕಾರಿಗಳ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ. ಅಕ್ರಮಗಳಿಗೆ ಸಹಕರಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಒಂದೆಡೆ ಮುಂದುವರಿದಿರುವಾಗಲೇ, ದರ್ಶನ್ ಅವರ ಖುದ್ದು ಹಾಜರಿ ಮನವಿ ತಿರಸ್ಕಾರ ಹಾಗೂ ಪ್ರದೂಷ್ ವಿಚಾರಣೆ ಇದೀಗ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.