ಲ್ಯಾಪ್ಟಾಪ್ ಚಾರ್ಜ್ಗೆ ಹಾಕಿಕೊಂಡೇ ಮಲಗಿದ್ದ 15 ವರ್ಷದ ವಿದ್ಯಾರ್ಥಿಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿರುವ ಘಟನೆ ತಿರುವಳ್ಳೂರಿನಲ್ಲಿ ನಡೆದಿದೆ. ಚಾರ್ಜರ್ ವೈರ್ ಆಕಸ್ಮಿಕವಾಗಿ ಕೈಗೆ ತಗುಲಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿದೆ.
ತಿರುವಳ್ಳೂರಿನ ಶ್ರೀನಿವಾಸನ್ ಎಂಬ ವಿದ್ಯಾರ್ಥಿ ಲ್ಯಾಪ್ಟಾಪ್ ಚಾರ್ಜ್ ಆಗುತ್ತಿದ್ದ ವೇಳೆ ಅದರ ಬಳಿ ಮಲಗಿದ್ದ ಎನ್ನಲಾಗಿದೆ. ಈ ವೇಳೆ ಆತನ ಕೈ ಆಕಸ್ಮಿಕವಾಗಿ ಚಾರ್ಜರ್ ವೈರ್ಗೆ ತಗುಲಿದೆ. ವಿದ್ಯುತ್ ಆಘಾತಕ್ಕೆ ಒಳಗಾದ ಆತನನ್ನು ಕೂಡಲೇ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮನವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಈ ಘಟನೆ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವಾಗ ಎಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ಮತ್ತೊಮ್ಮೆ ನೆನಪಿಸಿದೆ. ವಿಶೇಷವಾಗಿ ಹಾನಿಗೊಳಗಾದ ಚಾರ್ಜರ್, ವೈರ್ ಅಥವಾ ಎಕ್ಸ್ಟೆನ್ಶನ್ ಬಾಕ್ಸ್ಗಳನ್ನು ಬಳಸುವುದು ಅಪಾಯಕಾರಿಯಾಗಬಹುದು.
2024ರಲ್ಲೂ ನಡೆದಿತ್ತು ಇದೇ ರೀತಿಯ ಘಟನೆ
ಇದೇ ರೀತಿಯ ಮತ್ತೊಂದು ಘಟನೆ 2024ರಲ್ಲಿ ಚೆನ್ನೈನಲ್ಲಿ ನಡೆದಿತ್ತು. ಲ್ಯಾಪ್ಟಾಪ್ ಚಾರ್ಜ್ ಮಾಡುವಾಗ ಮಹಿಳಾ ವೈದ್ಯೆಯೊಬ್ಬರು ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದರು ಎಂದು ವರದಿಯಾಗಿತ್ತು.
ನಾಮಕ್ಕಲ್ ಜಿಲ್ಲೆಯ ಸರಣಿಕಾ ಎಂಬ ವೈದ್ಯೆ ಎಂಬಿಬಿಎಸ್ ಬಳಿಕ ಮಾನಸಿಕ ಆರೋಗ್ಯ ವಿಭಾಗದಲ್ಲಿ ಎಂಡಿ ಮಾಡುತ್ತಿದ್ದರು. ತರಬೇತಿಗಾಗಿ ಚೆನ್ನೈನಲ್ಲಿ ಉಳಿದುಕೊಂಡಿದ್ದರು. ಅವರು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪತಿ ಹಾಸ್ಟೆಲ್ಗೆ ಕರೆ ಮಾಡಿ ವಿಚಾರಿಸಿದ್ದರು.
ಹಾಸ್ಟೆಲ್ ಸಿಬ್ಬಂದಿ ಕೊಠಡಿಗೆ ತೆರಳಿ ನೋಡಿದಾಗ ಸರಣಿಕಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅವರ ಕೈಯಲ್ಲಿ ಲ್ಯಾಪ್ಟಾಪ್ ವೈರ್ ಇರುವುದು ಕಂಡುಬಂದಿತ್ತು. ಲ್ಯಾಪ್ಟಾಪ್, ಮೊಬೈಲ್ ಮತ್ತು ಏರ್ ಕೂಲರ್ ಸೇರಿದಂತೆ ಹಲವು ಸಾಧನಗಳನ್ನು ಒಂದೇ ಎಕ್ಸ್ಟೆನ್ಶನ್ ಬಾಕ್ಸ್ಗೆ ಸಂಪರ್ಕಿಸಲಾಗಿತ್ತು ಎನ್ನಲಾಗಿದೆ. ಹಾನಿಗೊಳಗಾದ ಕೇಬಲ್ನಿಂದ ವಿದ್ಯುತ್ ಸೋರಿಕೆಯಾಗಿರಬಹುದು ಎಂದು ಶಂಕಿಸಲಾಗಿತ್ತು. ಅವರ ಬಲಗೈಯಲ್ಲೂ ಸುಟ್ಟ ಗಾಯ ಕಂಡುಬಂದಿತ್ತು.