ಬಟ್ಟೆ ಬಿಚ್ಚಿ, ರೇಜರ್ ಬ್ಲೇಡ್‌ನಿಂದ ಹಲ್ಲೆಗೆ ಯತ್ನ; ರೈಲಿನಲ್ಲಿ ಖ್ಯಾತ ನಟಿ ಅವಾಂತರ

ಮುಂಬೈನಿಂದ ಸೂರತ್‌ಗೆ ತೆರಳುತ್ತಿದ್ದ ಅರಾವಳಿ ಎಕ್ಸ್‌ಪ್ರೆಸ್ ರೈಲಿನಲ್ಲಿ ನಟಿ ಅಂತರಾ ಬ್ಯಾನರ್ಜಿ ಗಲಾಟೆ ನಡೆಸಿದ ಆರೋಪ ಕೇಳಿಬಂದಿದೆ. ಸ್ಲೀಪರ್ ಕ್ಲಾಸ್ ಟಿಕೆಟ್ ಹೊಂದಿದ್ದರೂ ಎಸಿ ಕೋಚ್‌ಗೆ ತೆರಳಿ ರಿಸರ್ವ್ ಸೀಟ್‌ನಲ್ಲಿ ಕುಳಿತಿದ್ದರು ಎನ್ನಲಾಗಿದೆ. ಸೀಟ್ ತೆರವುಗೊಳಿಸುವಂತೆ ಸೂಚಿಸಿದಾಗ ಗಲಾಟೆ ಆರಂಭವಾಗಿದೆ ಎಂದು ವರದಿಯಾಗಿದೆ.

ಆಗಸ್ಟ್ 12ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ಪ್ರಯಾಣಿಕರು ಈ ಬಗ್ಗೆ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದ್ದು, ಬಳಿಕ ರೈಲ್ವೆ ಸಿಬ್ಬಂದಿಗೆ ವಿಷಯ ತಿಳಿಸಲಾಗಿದೆ.

ಸನ್ನಿವೇಶ ತಿಳಿಗೊಳಿಸಲು ಬಂದ RPF ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್ ಯಾಮಿನಿ ಕಾಂತ್ ಮಿಶ್ರಾ ಹಾಗೂ ಸಿಬ್ಬಂದಿ ಜೊತೆ ಅಂತರಾ ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ರೇಜರ್ ಬ್ಲೇಡ್‌ನಿಂದ ಹಲ್ಲೆ ಮಾಡಲು ಯತ್ನಿಸಿದ್ದು, ತಮಗೂ ಗಾಯ ಮಾಡಿಕೊಂಡಿದ್ದಾರೆ ಎಂದು RPF ಸಿಬ್ಬಂದಿ ಆರೋಪಿಸಿದ್ದಾರೆ.

ಗಲಾಟೆಯ ವೇಳೆ RPF ಅಧಿಕಾರಿಯ ಯೂನಿಫಾರ್ಮ್, ಕನ್ನಡಕ ಹಾಗೂ ಮೊಬೈಲ್ ಫೋನ್‌ಗೆ ಹಾನಿಯಾಗಿದೆ ಎನ್ನಲಾಗಿದೆ. ರೈಲಿನ ಗ್ಲಾಸ್ ಒಡೆದು ಹೊರಗೆ ಹೋಗಲು ಕೂಡ ಅಂತರಾ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬೋರಿವಲಿ ಮತ್ತು ದಹಾಣು ರೈಲು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ನಟಿ ಬಂಧನ, ಬಳಿಕ ಜಾಮೀನು
ದಹಾಣು ರೈಲು ನಿಲ್ದಾಣದಲ್ಲಿ ಅಂತರಾ ಬ್ಯಾನರ್ಜಿಯನ್ನು ರೈಲಿನಿಂದ ಇಳಿಸಿ GRP ಪೊಲೀಸರಿಗೆ ಒಪ್ಪಿಸಲಾಯಿತು. ಬಳಿಕ ಬೋರಿವಲಿ ರೈಲ್ವೆ ಪೊಲೀಸರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಸೇರಿದಂತೆ ವಿವಿಧ ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು.

ನಂತರ ನಟಿಗೆ ಜಾಮೀನು ದೊರೆತಿದೆ ಎಂದು ವರದಿಯಾಗಿದೆ.
ಅಂತರಾ ಬ್ಯಾನರ್ಜಿ ಅವರು ‘ಬಧೋ ಬಹು’, ‘ಕಸೌಟಿ ಜಿಂದಗಿ ಕೆ’ ಸೇರಿದಂತೆ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕೆಲವು ವೆಬ್ ಸೀರೀಸ್‌ಗಳಲ್ಲೂ ಕಾಣಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *