ಇಸ್ಲಾಮಾಬಾದ್: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕಳೆದ ಒಂದು-ಎರಡು ವರ್ಷಗಳಲ್ಲಿ ಚಿನ್ನದ ದರ ಭಾರಿ ಏರಿಕೆಯಾಗಿದ್ದು, ಸಾಮಾನ್ಯ ಜನರಿಗೆ ಚಿನ್ನ ಖರೀದಿಸುವುದು ಕಷ್ಟವಾಗಿದೆ. ಭಾರತ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಚಿನ್ನದ ಬೆಲೆ ಗಗನಕ್ಕೇರುತ್ತಿದೆ.
ಆಗಸ್ಟ್ ಮೊದಲ ವಾರದಲ್ಲೇ ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಶೇ.8ರಷ್ಟು ಏರಿಕೆಯಾಗಿದೆ. ಸದ್ಯ ಅಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಾಕ್ಕೆ 4,12,154 ಪಾಕಿಸ್ತಾನಿ ರೂಪಾಯಿ ಇದೆ.
ಪಾಕಿಸ್ತಾನದಲ್ಲಿ ಒಂದು ತೊಲಾ ಚಿನ್ನ ಎಂದರೆ ಸುಮಾರು 11.66 ಗ್ರಾಂ. ಇನ್ನು ಶುದ್ಧ ಚಿನ್ನ ಎಂದು ಕರೆಯಲಾಗುವ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ತೊಲಾಕ್ಕೆ ಸುಮಾರು 4,49,500 ಪಾಕಿಸ್ತಾನಿ ರೂಪಾಯಿ ಇದೆ.
ಇನ್ನು ಒಂದು ತೊಲಾ 22 ಕ್ಯಾರೆಟ್ ಚಿನ್ನದಿಂದ ಸರ ಮಾಡಿಸಬೇಕು ಎಂದರೆ ಬೆಲೆ ಮತ್ತಷ್ಟು ಹೆಚ್ಚಾಗುತ್ತದೆ. ಚಿನ್ನದ ದರದ ಜೊತೆಗೆ ಮೇಕಿಂಗ್ ಚಾರ್ಜ್ ಸೇರಿದಂತೆ ಒಟ್ಟು ವೆಚ್ಚ ಸುಮಾರು 4.70 ಲಕ್ಷ ಪಾಕಿಸ್ತಾನಿ ರೂಪಾಯಿ ಆಗಬಹುದು.
ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು, ಆರ್ಥಿಕ ಅನಿಶ್ಚಿತತೆ ಮತ್ತು ಮಾರುಕಟ್ಟೆಯ ಏರಿಳಿತದಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ. ಇದರ ಪರಿಣಾಮ ಭಾರತ ಮಾತ್ರವಲ್ಲ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲೂ ಕಾಣಿಸುತ್ತಿದೆ.
ಪಾಕಿಸ್ತಾನದಲ್ಲಿ ಈಗಾಗಲೇ ಹಣದುಬ್ಬರದಿಂದ ಜನ ಸಾಮಾನ್ಯರ ಜೀವನ ಕಷ್ಟಕರವಾಗಿದೆ. ಇದರ ನಡುವೆ ಚಿನ್ನದ ಬೆಲೆ ಮತ್ತಷ್ಟು ಏರಿಕೆಯಾಗಿರುವುದು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆ ಆಗಿದೆ.
ಆದರೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೂ ಹೂಡಿಕೆದಾರರಲ್ಲಿ ಚಿನ್ನದ ಮೇಲಿನ ಆಸಕ್ತಿ ಕಡಿಮೆಯಾಗಿಲ್ಲ. ಬದಲಿಗೆ, ಬೆಲೆ ಮತ್ತಷ್ಟು ಏರಬಹುದು ಎಂಬ ನಿರೀಕ್ಷೆಯಲ್ಲಿ ಚಿನ್ನದ ಮೇಲಿನ ಹೂಡಿಕೆಯ ಪ್ರಮಾಣವೂ ಹೆಚ್ಚಾಗುತ್ತಿದೆ.