ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ವೇಳೆ ನಟ ಯಶ್ ಸಿನಿಮಾ ಬಗ್ಗೆ ಹಾಗೂ ತಮ್ಮ ಸಿನಿ ಜರ್ನಿ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಈ ಹಂತಕ್ಕೆ ಬರಲು ಕರ್ನಾಟಕದ ಜನರ ಪ್ರೀತಿ ಮತ್ತು ಬೆಂಬಲವೇ ಕಾರಣ ಎಂದು ಯಶ್ ಹೇಳಿದ್ದಾರೆ. ತಮ್ಮ ಹಿಂದಿನ ಸಿನಿಮಾಗಳಿಗೆ ಪ್ರೇಕ್ಷಕರು ನೀಡಿದ ಪ್ರೀತಿಯೇ ‘ಟಾಕ್ಸಿಕ್’ಗೆ ಇಂಧನವಾಗಿದೆ ಎಂದು ಅವರು ಹೇಳಿದ್ದಾರೆ.
“ನಿಮ್ಮ ಆಶೀರ್ವಾದ ಇರಲಿ, ಯಶ್ ಮೇಲೆ ನಂಬಿಕೆ ಇರಲಿ. ನಿಮ್ಮ ತಲೆ ತಗ್ಗಿಸೋಕೆ ಬಿಡಲ್ಲ. ಹೆಮ್ಮೆಯಿಂದ ಸಿನಿಮಾ ನೋಡಿ” ಎಂದು ಯಶ್ ಅಭಿಮಾನಿಗಳಿಗೆ ಹೇಳಿದ್ದಾರೆ.
‘ಟಾಕ್ಸಿಕ್’ ಸಾಮಾನ್ಯ ಕಮರ್ಶಿಯಲ್ ಸಿನಿಮಾ ಅಲ್ಲ. ಯುವಪೀಳಿಗೆ ಎದುರಿಸುತ್ತಿರುವ ಗೊಂದಲಗಳು, ಜೀವನದಲ್ಲಿ ಎದುರಾಗುವ ಹಲವು ವಿಚಾರಗಳು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿವೆ ಎಂದು ಯಶ್ ಹೇಳಿದ್ದಾರೆ.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ತಾವು ಹಳ್ಳಿಯಿಂದ ಬಂದವರು, ಇಂಗ್ಲಿಷ್ ಬಗ್ಗೆ ಒಮ್ಮೆ ಆತ್ಮವಿಶ್ವಾಸ ಕಡಿಮೆ ಇತ್ತು. ಆದರೆ ಅಂದುಕೊಂಡರೆ ಸಾಧಿಸಲು ಸಾಧ್ಯ ಎಂಬುದನ್ನು ಈ ಸಿನಿಮಾದ ಮೂಲಕ ತೋರಿಸಿದ್ದೇವೆ ಎಂದು ಯಶ್ ಹೇಳಿದ್ದಾರೆ.
‘ಕೆಜಿಎಫ್’ ನಂತರವೂ ಅದೇ ರೀತಿಯ ಕಮರ್ಶಿಯಲ್ ಸಿನಿಮಾಗಳನ್ನು ಮಾಡುವ ಅವಕಾಶವಿತ್ತು. ಆದರೆ ವಿಭಿನ್ನವಾದ ಸಿನಿಮಾವನ್ನು ಮಾಡಬೇಕು ಎಂಬ ನಿರ್ಧಾರದಿಂದ ‘ಟಾಕ್ಸಿಕ್’ ಆಯ್ಕೆ ಮಾಡಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.
ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಪ್ರತಿಭೆ ಮತ್ತು ಸಿನಿಮಾದ ಮೇಲಿನ ಹಠವನ್ನು ಯಶ್ ಮೆಚ್ಚಿಕೊಂಡಿದ್ದಾರೆ. ಸಿನಿಮಾಗಾಗಿ ಅವರು ತಮ್ಮ ಸಮಯ ಹಾಗೂ ಕುಟುಂಬವನ್ನು ತ್ಯಾಗ ಮಾಡಿದ್ದಾರೆ. ಆ ಪರಿಶ್ರಮ ಮತ್ತು ಪ್ರತಿಭೆ ತೆರೆಯ ಮೇಲೆ ಕಾಣಲಿದೆ ಎಂದು ಯಶ್ ಹೇಳಿದ್ದಾರೆ.