ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ವಿರುದ್ಧ ಅವರ ಪತ್ನಿ ಸಂಗೀತಾ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದಾರೆ. ಸಂಗೀತಾ ಅವರ ನಿರ್ಧಾರದ ಬೆನ್ನಲ್ಲೇ ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿದೆ.
ಸಂಗೀತಾ ಅವರು ಲಂಡನ್‌ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ತಮಿಳುನಾಡು ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಜಯ್ ಖುದ್ದಾಗಿ ವಿಚಾರಣೆಗೆ ಹಾಜರಾಗಿರಲಿಲ್ಲ.
ಈ ವರ್ಷದ ಫೆಬ್ರವರಿಯಲ್ಲಿ ಸಂಗೀತಾ ಅವರು ವಿಜಯ್ ವಿರುದ್ಧ ವಿಚ್ಛೇದನ ಅರ್ಜಿ ಸಲ್ಲಿಸಿದ್ದರು. ದಂಪತಿಯ ನಡುವೆ ಸರಿಪಡಿಸಲಾಗದ ಭಿನ್ನಾಭಿಪ್ರಾಯಗಳಿವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಜೊತೆಗೆ ಜೀವನಾಂಶ ಹಾಗೂ ಚೆನ್ನೈನ ನೀಲಂಗರೈನಲ್ಲಿರುವ ನಿವಾಸದಲ್ಲಿ ವಾಸಿಸುವ ಹಕ್ಕನ್ನೂ ಕೋರಿದ್ದರು.
ವಿಚ್ಛೇದನ ಅರ್ಜಿ ಹಲವು ಬಾರಿ ಮುಂದೂಡಿಕೆಯಾಗಿತ್ತು. ಜೂನ್ 15ರಂದು ನಡೆದ ವಿಚಾರಣೆಯಲ್ಲೇ ಸಂಗೀತಾ ಅರ್ಜಿಯನ್ನು ಹಿಂಪಡೆಯುವ ಇಚ್ಛೆ ವ್ಯಕ್ತಪಡಿಸಿದ್ದರು. ಇದೀಗ ಅಧಿಕೃತವಾಗಿ ಅರ್ಜಿಯನ್ನು ಹಿಂಪಡೆದಿರುವುದರಿಂದ ಪ್ರಕರಣ ಮುಕ್ತಾಯಗೊಂಡಿದೆ.
ವಿಜಯ್ ಮತ್ತು ಸಂಗೀತಾ 1999ರ ಆಗಸ್ಟ್ 25ರಂದು ಚೆನ್ನೈನಲ್ಲಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿಜಯ್ ಅವರ ಹಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಂಗೀತಾ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಇಬ್ಬರ ವೈವಾಹಿಕ ಜೀವನದ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು.
ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ಬಳಿಕವೂ ಈ ವಿಚಾರ ಮತ್ತಷ್ಟು ಸುದ್ದಿಯಾಗಿತ್ತು. ಆದರೆ ಇದೀಗ ಸಂಗೀತಾ ವಿಚ್ಛೇದನ ಅರ್ಜಿಯನ್ನೇ ಹಿಂಪಡೆದಿರುವುದು ಮತ್ತೆ ಕುತೂಹಲಕ್ಕೆ ಕಾರಣವಾಗಿದೆ.