ಫ್ರೆಂಡ್‌ಶಿಪ್ ಡೇ ರೀತಿನೇ ಕೈಮಗ್ಗ ದಿನವನ್ನೂ ಆಚರಿಸಿ; ದೇಶದ ಜನತೆಗೆ ಪ್ರಧಾನಿ ಮೋದಿ ವಿಶೇಷ ಕರೆ

ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ವಿಶೇಷ ಸಂದೇಶ ನೀಡಿದ್ದಾರೆ. ಫ್ರೆಂಡ್‌ಶಿಪ್ ಡೇಯನ್ನು ಯಾವ ಉತ್ಸಾಹದಿಂದ ಆಚರಿಸುತ್ತೀರೋ, ಅದೇ ರೀತಿ ಆಗಸ್ಟ್ 7ರಂದು ಕೈಮಗ್ಗ ದಿನವನ್ನೂ ಆಚರಿಸಿ ಎಂದು ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು, ಸ್ವದೇಶಿ ಚಳುವಳಿಯ ಮಹತ್ವವನ್ನು ನೆನಪಿಸಿದರು. 1905ರ ಆಗಸ್ಟ್ 7ರಂದು ಸ್ವದೇಶಿ ಚಳುವಳಿ ಆರಂಭವಾಗಿದ್ದು, ಅದು ಭಾರತದ ಸ್ವಾವಲಂಬನೆಯ ಅಡಿಪಾಯವಾಗಿತ್ತು ಎಂದು ಹೇಳಿದರು.

“ಕಳೆದ ವಾರ ಫ್ರೆಂಡ್‌ಶಿಪ್ ಡೇ ಆಚರಿಸಿದ್ದೀರಿ. ಅದೇ ಉತ್ಸಾಹದಿಂದ ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವನ್ನು ಆಚರಿಸಿ. ಆ ದಿನ ಕನಿಷ್ಠ ಒಂದು ಕೈಮಗ್ಗ ಉತ್ಪನ್ನವನ್ನಾದರೂ ಖರೀದಿಸಿ. ಇದರಿಂದ ನೇಕಾರ ಕುಟುಂಬಗಳಿಗೆ ಬೆಂಬಲ ಸಿಗುತ್ತದೆ” ಎಂದು ಮೋದಿ ಮನವಿ ಮಾಡಿದರು.

ಕೈಮಗ್ಗ ಉತ್ಪನ್ನಗಳನ್ನು ಕೇವಲ ವಸ್ತುವಾಗಿ ನೋಡಬೇಡಿ. ಅದರ ಹಿಂದೆ ಒಬ್ಬ ನೇಕಾರನ ಪರಿಶ್ರಮ, ಕೌಶಲ್ಯ ಮತ್ತು ಬದುಕಿನ ಕಥೆ ಇರುತ್ತದೆ ಎಂದು ಪ್ರಧಾನಿ ಹೇಳಿದರು. ಕೈಮಗ್ಗದ ಬಟ್ಟೆ ಹಾಗೂ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವ ಮೂಲಕ ಲಕ್ಷಾಂತರ ನೇಕಾರ ಕುಟುಂಬಗಳಿಗೆ ನೆರವಾಗಬಹುದು ಎಂದರು.

ಯುವಜನತೆಗೆ ವಿಶೇಷ ಕರೆ ನೀಡಿದ ಪ್ರಧಾನಿ, ‘ಗೆಟ್ ರೆಡಿ ವಿತ್ ಮಿ’ (GRWM) ಶೈಲಿಯ ವಿಡಿಯೋ ಮಾಡಿ, ಕೈಮಗ್ಗ ಉತ್ಪನ್ನಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದರು. ಇದರಿಂದ ಭಾರತದ ನೇಕಾರರ ಪ್ರತಿಭೆ ದೇಶ-ವಿದೇಶಗಳಿಗೆ ತಲುಪಲಿದೆ ಎಂದು ಹೇಳಿದರು.

ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡಲು ಕೈಮಗ್ಗ ಕ್ಷೇತ್ರಕ್ಕೆ ಎಲ್ಲರೂ ಬೆಂಬಲ ನೀಡಬೇಕು. ಪ್ರತಿಯೊಬ್ಬರೂ ಕನಿಷ್ಠ ಒಂದು ಕೈಮಗ್ಗ ಉತ್ಪನ್ನ ಖರೀದಿಸಿ, ಅದರ ಬಗ್ಗೆ ವಿಡಿಯೋ ಮಾಡಿ ಹಂಚಿಕೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದರು.

Leave a Reply

Your email address will not be published. Required fields are marked *