ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Vijay) ನೇತೃತ್ವದ ಸರ್ಕಾರ ತನ್ನ ಮೊದಲ ಪೂರ್ಣ ಪ್ರಮಾಣದ ಬಜೆಟ್ನ್ನು ವಿಧಾನಸಭೆಯಲ್ಲಿ ಮಂಡಿಸಿದೆ. ಹಣಕಾಸು ಸಚಿವ ಎನ್. ಮೇರಿ ವಿಲ್ಸನ್ ಬಜೆಟ್ ಮಂಡಿಸಿದ್ದು, ಶಿಕ್ಷಣ, ಮಹಿಳಾ ಕಲ್ಯಾಣ, ನವಜಾತ ಶಿಶುಗಳು, ಯುವಕರ ಕೌಶಲ್ಯಾಭಿವೃದ್ಧಿ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಬಜೆಟ್ ಭಾಷಣದಲ್ಲಿ ಮಾತನಾಡಿದ ಸಚಿವರು, 2031ರೊಳಗೆ ತಮಿಳುನಾಡನ್ನು 1.5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು. ಹಿಂದಿನ ಆಡಳಿತದಲ್ಲಿ ರಾಜ್ಯದ ಸಾಲ ಹೆಚ್ಚಾಗಿದೆ ಎಂದು ಟೀಕಿಸಿದ ಅವರು, ಮದ್ಯ ಉತ್ಪಾದನಾ ಘಟಕಗಳ ಮೇಲೆ ವಿಶೇಷ ಶುಲ್ಕ ವಿಧಿಸಿ 1,000 ರೂ. ಕೋಟಿ ಹೆಚ್ಚುವರಿ ಆದಾಯ ಗಳಿಸುವ ನಿರೀಕ್ಷೆಯಿದೆ ಎಂದರು.
ಮಹಿಳೆಯರಿಗೆ ಚಿನ್ನ, ನವಜಾತ ಶಿಶುಗಳಿಗೆ ಚಿನ್ನದ ಉಂಗುರ
ಮಹಿಳಾ ಫಲಾನುಭವಿಗಳಿಗೆ 8 ಗ್ರಾಂ ಚಿನ್ನ ಮತ್ತು ರೇಷ್ಮೆ ಸೀರೆ ನೀಡುವ *‘ಚಿನ್ನದ ನಾಣ್ಯ, ರೇಷ್ಮೆ ಸೀರೆ ಯೋಜನೆ’*ಗೆ ₹812 ಕೋಟಿ ಮೀಸಲಿಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ ಚಿನ್ನದ ಉಂಗುರ ನೀಡುವ ಯೋಜನೆಗೆ ₹560 ಕೋಟಿ ಮೀಸಲಿಡಲಾಗಿದೆ.
ಶಿಕ್ಷಣಕ್ಕೆ ಭಾರಿ ಅನುದಾನ
ಶಾಲಾ ಶಿಕ್ಷಣ ಇಲಾಖೆಗೆ 44,527 ಕೋಟಿ ರೂ. ಮತ್ತು ಉನ್ನತ ಶಿಕ್ಷಣ ಇಲಾಖೆಗೆ 8,393 ರೂ. ಕೋಟಿ ಮೀಸಲಿಡಲಾಗಿದೆ. 3,734 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ₹300 ಕೋಟಿ, 10 ಸಾವಿರ ಶಾಲೆಗಳಲ್ಲಿ ‘ಸೂಪರ್ ಕ್ಲೀನ್, ಸೂಪರ್ ಕ್ಯಾಂಪಸ್’ ಯೋಜನೆಗೆ ₹139 ಕೋಟಿ ನೀಡಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಕಾಮರಾಜರ್ ಮಾದರಿ ಶಾಲೆಗಳ ಸ್ಥಾಪನೆಗೆ ₹125 ಕೋಟಿ ಮೀಸಲಾಗಿದೆ.
ಇದೇ ವೇಳೆ, ವೈದ್ಯಕೀಯ ಪ್ರವೇಶಕ್ಕೆ ನೀಟ್ ಬದಲು 12ನೇ ತರಗತಿ ಅಂಕಗಳನ್ನು ಪರಿಗಣಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್, AI ತರಬೇತಿ
‘ವೆಟ್ರಿ ಮಡಿಕಾನಿನಿ ತಿಟ್ಟಂ’ ಯೋಜನೆಯಡಿ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ನೀಡಲು ₹2,000 ಕೋಟಿ ಮೀಸಲಿಡಲಾಗಿದೆ. ರಾಜ್ಯದಲ್ಲಿ ಐದು ಹೊಸ ಐಟಿಐಗಳನ್ನು ₹90 ಕೋಟಿ ವೆಚ್ಚದಲ್ಲಿ ಆರಂಭಿಸಲಾಗುವುದು. 2031ರೊಳಗೆ 50 ಸಾವಿರ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ (AI) ತರಬೇತಿ ನೀಡುವ ಗುರಿ ಹೊಂದಲಾಗಿದೆ. 11ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಹೆಲ್ಮೆಟ್ ಮತ್ತು ನೀರಿನ ಬಾಟಲಿ ವಿತರಿಸಲು 277 ರೂ. ಕೋಟಿ ಮೀಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣಕ್ಕೂ ಆದ್ಯತೆ
ಹಜ್ ಯಾತ್ರೆ ಸಬ್ಸಿಡಿಯನ್ನು 25,000ರಿಂದ 35,000 ರೂ. ಹೆಚ್ಚಿಸಲಾಗಿದೆ. ಕ್ರೈಸ್ತ ಮತ್ತು ಮುಸ್ಲಿಂ ಮಹಿಳಾ ಸಂಘಗಳಿಗೆ ₹1.05 ಕೋಟಿ, ಐದು ಮುಸ್ಲಿಂ ಸ್ಮಶಾನಗಳ ಅಭಿವೃದ್ಧಿಗೆ ₹34 ಕೋಟಿ ನೀಡಲಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಯೋಜನೆ ಮುಂದುವರಿಯಲಿದೆ.
ಕ್ರೀಡೆ, ಉಚಿತ ವಿದ್ಯುತ್ ಮತ್ತು ಮದ್ಯದಂಗಡಿ ಬಂದ್
ಒಲಿಂಪಿಕ್ ಪದಕ ಗುರಿಯೊಂದಿಗೆ ರಾಜ್ಯದಲ್ಲಿ 10 ಒಲಿಂಪಿಕ್ ಕೇಂದ್ರಗಳ ಸ್ಥಾಪನೆಗೆ ₹5.50 ಕೋಟಿ ಮೀಸಲಾಗಿದೆ. ‘ಮಾದಕವಸ್ತು ಮುಕ್ತ ತಮಿಳುನಾಡು’ ಯೋಜನೆಗೆ 7 ರೂ. ಕೋಟಿ ಘೋಷಿಸಲಾಗಿದೆ. ಜೊತೆಗೆ 717 ಮದ್ಯದಂಗಡಿಗಳನ್ನು ಮುಚ್ಚುವುದು ಹಾಗೂ ಗೃಹಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಮಹತ್ವದ ಘೋಷಣೆಗಳನ್ನೂ ಸರ್ಕಾರ ಮಾಡಿದೆ.
ಒಟ್ಟಾರೆ, ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ ಮೊದಲ ಬಜೆಟ್ನಲ್ಲಿ ಶಿಕ್ಷಣ, ಮಹಿಳಾ ಸಬಲೀಕರಣ, ಯುವಕರ ಭವಿಷ್ಯ ಮತ್ತು ಸಾಮಾಜಿಕ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.