ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಮೊದಲ ಭಾಗದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಜೊತೆಗೆ, ಜಾಗತಿಕ ಪ್ರೇಕ್ಷಕರಿಗಾಗಿ ಚಿತ್ರದ ಇಂಗ್ಲಿಷ್ ಡಬ್ ಟ್ರೇಲರ್ ಕೂಡ ಬಿಡುಗಡೆ ಮಾಡಲಾಗಿದೆ.
‘ರಾಮಾಯಣ’ ಚಿತ್ರದ ಅಂತರರಾಷ್ಟ್ರೀಯ ವಿತರಣಾ ಪಾಲುದಾರ ಸೋನಿ ಪಿಕ್ಚರ್ಸ್ ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಿ, 2026ರ ನವೆಂಬರ್ 6ರಂದು ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ.
ಸುಮಾರು 4 ನಿಮಿಷ 9 ಸೆಕೆಂಡ್ ಇರುವ ಟ್ರೇಲರ್‌ನಲ್ಲಿ ರಣಬೀರ್ ಕಪೂರ್ ಅವರ ಶ್ರೀರಾಮ, ಯಶ್ ಅವರ ರಾವಣ, ಸಾಯಿ ಪಲ್ಲವಿ ಅವರ ಸೀತೆ ಪಾತ್ರಗಳ ಭರ್ಜರಿ ಝಲಕ್ ಕಾಣಿಸಿದೆ. ಜೊತೆಗೆ ಲಕ್ಷ್ಮಣನಾಗಿ ರವಿ ದುಬೆ, ಕೈಕೇಯಿಯಾಗಿ ಲಾರಾ ದತ್ತ, ಶೂರ್ಪನಖಿಯಾಗಿ ರಾಕುಲ್ ಪ್ರೀತ್ ಸಿಂಗ್, ರಾಜ ದಶರಥನಾಗಿ ಅರುಣ್ ಗೋವಿಲ್ ಅವರ ಪಾತ್ರಗಳಿಗೂ ವಿಶೇಷ ಸ್ಥಾನ ನೀಡಲಾಗಿದೆ.
ಇದರೊಂದಿಗೆ ಮಂಥರಾ ಪಾತ್ರದಲ್ಲಿ ಸೀಬಾ ಚಡ್ಡಾ, ಕೈಕೇಸಿಯಾಗಿ ಶೋಭನಾ, ವಿದ್ಯುತ್ಜಿಹ್ವನಾಗಿ ವಿವೇಕ್ ಒಬೆರಾಯ್, ಮಾರೀಚನಾಗಿ ಸೌರಭ್ ಸಚ್‌ದೇವ, ಸುಮಾಲಿಯಾಗಿ ಚೇತನ್ ಹಂಸರಾಜ್ ಹಾಗೂ ಕುಂಭಕರ್ಣನಾಗಿ ಫೈಸಲ್ ಮಲಿಕ್ ಕೂಡ ಕಾಣಿಸಿಕೊಂಡಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ನಟಿಸಿರುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.
ಜುಲೈ 30ರಂದು ಬ್ರಹ್ಮ ಮುಹೂರ್ತದಲ್ಲಿ ಚಿತ್ರದ ಟ್ರೇಲರ್ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಟ್ರೇಲರ್ ಬಿಡುಗಡೆಗೂ ಮುನ್ನ ದೆಹಲಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು.
ಈಗ ಇಂಗ್ಲಿಷ್ ಟ್ರೇಲರ್ ಬಿಡುಗಡೆಯಾಗಿರುವುದರಿಂದ, ‘ರಾಮಾಯಣ’ ಸಿನಿಮಾ ಜಾಗತಿಕ ಮಟ್ಟದಲ್ಲೂ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ. ಎರಡು ಭಾಗಗಳಾಗಿ ಬರುತ್ತಿರುವ ಈ ಮಹತ್ವಾಕಾಂಕ್ಷಿ ಚಿತ್ರದಲ್ಲಿ ಮೊದಲ ಭಾಗ ದೀಪಾವಳಿ ನಂತರ ನವೆಂಬರ್ 6ರಂದು ಪ್ರೇಕ್ಷಕರ ಮುಂದೆ ಬರಲಿದೆ.