ಯಶ್‌ರ ರಾವಣನ ಲುಕ್ ಹಿಂದಿನ ಮಾಸ್ಟರ್ ಮೈಂಡ್ ಇವರೇ! KGFನಿಂದ ರಾಮಾಯಣದವರೆಗೆ 11 ವರ್ಷಗಳ ಒಡನಾಟ

‘ರಾಮಾಯಣ’ ಸಿನಿಮಾದಲ್ಲಿ ಯಶ್ ನಿರ್ವಹಿಸಿರುವ ರಾವಣನ ಪಾತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಿನಿಮಾದಲ್ಲಿ ರಾವಣನ ವಿವಿಧ ಲುಕ್‌ಗಳು ಕೂಡ ಗಮನ ಸೆಳೆಯುತ್ತಿವೆ. ತಪಸ್ವಿ, ಯೋಧ, ಮಹಾರಾಜ, ಮುನಿ ಹೀಗೆ ಹಲವು ರೂಪಗಳಲ್ಲಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಪ್ರತಿಯೊಂದು ಲುಕ್ ಹಿಂದೆಯೂ ಫ್ಯಾಷನ್ ಕಲಾವಿದೆ ಸಾನಿಯಾ ಸರ್ಧಾರಿಯಾ ಅವರ ಶ್ರಮವಿದೆ.

ಯಶ್ ಜೊತೆ 11 ವರ್ಷಗಳ ಒಡನಾಟ

ಸಾನಿಯಾ ಸರ್ಧಾರಿಯಾ ಜನಪ್ರಿಯ ಫ್ಯಾಷನ್ ಕಲಾವಿದೆ. ಕಳೆದ 11 ವರ್ಷಗಳಿಂದ ಅವರು ಯಶ್ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಸಿನಿಮಾಗಳ ಪಾತ್ರಗಳಿಗೆ ಮಾತ್ರವಲ್ಲದೆ, ಯಶ್ ಅವರ ವಿವಿಧ ಕಾರ್ಯಕ್ರಮಗಳಿಗೂ ಲುಕ್ ಸಿದ್ಧಪಡಿಸುತ್ತಿದ್ದಾರೆ.

‘ಕೆಜಿಎಫ್’ ಸಿನಿಮಾದ ರಾಕಿಭಾಯ್ ಲುಕ್‌ನಿಂದ ಹಿಡಿದು ‘ಟಾಕ್ಸಿಕ್’ ಚಿತ್ರದ ಹಲವು ಲುಕ್‌ಗಳ ವಿನ್ಯಾಸದಲ್ಲೂ ಸಾನಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ‘ರಾಮಾಯಣ’ ಸಿನಿಮಾದಲ್ಲೂ ಯಶ್ ಅವರ ರಾವಣನ ಪಾತ್ರಕ್ಕೆ ವಿಭಿನ್ನ ರೂಪ ನೀಡಿದ್ದಾರೆ.

ಕೆಜಿಎಫ್, ಟಾಕ್ಸಿಕ್‌ಗಿಂತಲೂ ಕ್ಲಿಷ್ಟವಾಗಿತ್ತು ರಾವಣನ ಲುಕ್!

ರಾವಣನ ಪಾತ್ರಕ್ಕೆ ಕಾಸ್ಟ್ಯೂಮ್, ಆಭರಣ, ಹೇರ್‌ಸ್ಟೈಲ್ ಸೇರಿದಂತೆ ಪ್ರತಿಯೊಂದು ಅಂಶವನ್ನು ನಿರ್ಧರಿಸುವುದು ಸುಲಭವಾಗಿರಲಿಲ್ಲ ಎಂದು ಸಾನಿಯಾ ಹೇಳಿದ್ದಾರೆ.

‘ಯಶ್ ಅವರ ಕೆಜಿಎಫ್ ಮತ್ತು ಟಾಕ್ಸಿಕ್ ಸಿನಿಮಾಗಳಿಗಿಂತಲೂ ರಾವಣನ ಲುಕ್ ವಿನ್ಯಾಸ ಮಾಡುವುದು ಹೆಚ್ಚು ಕ್ಲಿಷ್ಟಕರವಾಗಿತ್ತು. ರಾವಣನ ವಿಭಿನ್ನ ವ್ಯಕ್ತಿತ್ವಗಳನ್ನೇ ಲುಕ್ ಸಿದ್ಧಪಡಿಸಲು ಆಧಾರವಾಗಿಟ್ಟುಕೊಂಡೆವು. ವೀರತ್ವ, ಶಿವಭಕ್ತಿ, ಅಹಂಕಾರ, ಧೈರ್ಯ, ಜ್ಞಾನ ಮತ್ತು ಮಹತ್ವಾಕಾಂಕ್ಷೆ ಹೀಗೆ ಹಲವು ಗುಣಗಳನ್ನು ಗಮನದಲ್ಲಿಟ್ಟುಕೊಂಡು ಉಡುಪು, ಬಣ್ಣ ಮತ್ತು ಆಭರಣಗಳನ್ನು ಆಯ್ಕೆ ಮಾಡಿದೆವು’ ಎಂದು ಸಾನಿಯಾ ತಿಳಿಸಿದ್ದಾರೆ.

ಆಭರಣಗಳ ವಿನ್ಯಾಸಕ್ಕೂ ಇತ್ತು ವಿಶೇಷ ಕಲ್ಪನೆ

ರಾವಣನ ಪಾತ್ರಕ್ಕಾಗಿ ಸಿದ್ಧಪಡಿಸಿದ ಆಭರಣಗಳು ಶಸ್ತ್ರಾಸ್ತ್ರಗಳಿಂದ ಪ್ರೇರಣೆ ಪಡೆದಿವೆ. ರಾವಣನ ಕಿರೀಟವನ್ನೂ ಇದೇ ಕಲ್ಪನೆಯ ಆಧಾರದಲ್ಲಿ ವಿನ್ಯಾಸಗೊಳಿಸಲಾಗಿದೆ. ಉಡುಪಿನಲ್ಲೂ ಯೋಧನ ಛಾಯೆ ಎದ್ದು ಕಾಣುವಂತೆ ನೋಡಿಕೊಳ್ಳಲಾಗಿದೆ.

ಇನ್ನು ರಾವಣ ತಾಂಡವದ ದೃಶ್ಯಕ್ಕಾಗಿ ಸಂಪೂರ್ಣ ವಿಭಿನ್ನ ವಿನ್ಯಾಸವನ್ನು ರೂಪಿಸಲಾಗಿತ್ತು. ಆ ದೃಶ್ಯದಲ್ಲಿ ರಾವಣನನ್ನು ಶಿವನ ಪರಮಭಕ್ತನಾಗಿ ಮಾತ್ರ ಬಿಂಬಿಸುವ ರೀತಿಯಲ್ಲಿ ಲುಕ್ ಸಿದ್ಧಪಡಿಸಿದ್ದಾಗಿ ಸಾನಿಯಾ ಹೇಳಿದ್ದಾರೆ.

ಯಶ್ ಲುಕ್ ಬಗ್ಗೆ ಸಾನಿಯಾ ಹೇಳಿದ್ದೇನು?

ಯಶ್ ಅವರೊಂದಿಗೆ ಇಷ್ಟು ವರ್ಷ ಕೆಲಸ ಮಾಡಿರುವ ಅನುಭವದ ಬಗ್ಗೆಯೂ ಸಾನಿಯಾ ಮಾತನಾಡಿದ್ದಾರೆ. ಯಶ್ ಕೆಲಸ ಮಾಡುವಾಗ ಸಾಕಷ್ಟು ಸ್ವಾತಂತ್ರ್ಯ ನೀಡುತ್ತಾರೆ. ಆದರೆ, ತಮ್ಮ ಮೇಲೆ ಯಾವುದೇ ಉಡುಪು ಅಥವಾ ಲುಕ್ ಅನ್ನು ಬಲವಂತವಾಗಿ ಹೇರಿದಂತೆ ಇರಬಾರದು ಎಂಬುದು ಅವರ ನಿರೀಕ್ಷೆ. ಬದಲಿಗೆ, ಯಶ್ ಅವರ ವ್ಯಕ್ತಿತ್ವಕ್ಕೆ ಅಥವಾ ಪಾತ್ರಕ್ಕೆ ಸಹಜವಾಗಿ ಹೊಂದುವ ಲುಕ್ ಇರಬೇಕು. ಇದೊಂದೇ ಅವರ ಪ್ರಮುಖ ಬೇಡಿಕೆ ಎಂದು ಸಾನಿಯಾ ತಿಳಿಸಿದ್ದಾರೆ.

Leave a Reply

Your email address will not be published. Required fields are marked *