ಕೆಲಸದಿಂದ ತೆಗೆದುಹಾಕಿದ ಉದ್ಯೋಗಿಯೇ ಎರಡು ವರ್ಷಗಳ ಬಳಿಕ ತನ್ನ ಮಾಜಿ ಬಾಸ್ಗೆ ಉದ್ಯೋಗದ ಆಫರ್ ನೀಡಿದ್ದಾರೆ. ಅಷ್ಟೇ ಅಲ್ಲ, ಈಗಿರುವ ಸಂಬಳಕ್ಕಿಂತ ಶೇ.20ರಷ್ಟು ಹೆಚ್ಚು ವೇತನ ಮತ್ತು ಉತ್ತಮ ಕೆಲಸದ ಸಮಯವನ್ನೂ ನೀಡುವುದಾಗಿ ಹೇಳಿದ್ದಾರೆ. ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಉದ್ಯೋಗಿಯ ಬಗ್ಗೆ ದ್ವೇಷವಿರಲಿಲ್ಲ, ನನ್ನ ಕರ್ತವ್ಯ ನಿಭಾಯಿಸಿದ್ದೆ
ಕೆರಿಯರ್ ಗೈಡೆನ್ಸ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ತಾವು ಗೋದಾಮಿನ ತಂಡವೊಂದರ ಮೇಲ್ವಿಚಾರಕರಾಗಿದ್ದಾಗ, ತಮ್ಮ ತಂಡದಲ್ಲಿದ್ದ ಉದ್ಯೋಗಿಯೊಬ್ಬರಿಗೆ ಪದೇಪದೇ ಹಾಜರಾತಿ ಸಮಸ್ಯೆ ಎದುರಾಗಿತ್ತು. ಈ ಕಾರಣಕ್ಕೆ ಅವರನ್ನು ಕೆಲಸದಿಂದ ತೆಗೆದುಹಾಕಲು ಹೆಚ್ಆರ್ ನಿರ್ಧರಿಸಿತ್ತು.
ಮೇಲ್ವಿಚಾರಕರಾಗಿದ್ದ ತಾವು ಉದ್ಯೋಗಿಗೆ ಈ ವಿಷಯ ತಿಳಿಸಿದ್ದರು. ಆದರೆ ಆತನ ಬಗ್ಗೆ ಯಾವುದೇ ದ್ವೇಷ ಅಥವಾ ವೈಯಕ್ತಿಕ ಅಸಮಾಧಾನ ಇರಲಿಲ್ಲ. ಕೇವಲ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದಾಗಿ ಅವರು ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಮಾಜಿ ಉದ್ಯೋಗಿಯಿಂದಲೇ ಜಾಬ್ ಆಫರ್!
ಇತ್ತೀಚೆಗೆ ಉತ್ಪಾದನಾ ಕಂಪನಿಯೊಂದರಲ್ಲಿ ಆಪರೇಷನ್ಸ್ ವಿಭಾಗದ ಹುದ್ದೆಗಾಗಿ ಸಂದರ್ಶನಕ್ಕೆ ತೆರಳಿದ್ದರು. ಇಂಟರ್ವ್ಯೂ ರೂಮ್ಗೆ ಪ್ರವೇಶಿಸಿದಾಗ ಎದುರಿಗೆ ಕುಳಿತಿದ್ದ ವ್ಯಕ್ತಿಯನ್ನು ನೋಡಿ ಅಚ್ಚರಿಯಾಗಿದೆ. ಎರಡು ವರ್ಷಗಳ ಹಿಂದೆ ತಾವೇ ಕೆಲಸದಿಂದ ವಜಾ ಮಾಡಿದ್ದ ಉದ್ಯೋಗಿ ಇದೀಗ ಉನ್ನತ ಹುದ್ದೆಯಲ್ಲಿದ್ದರು.
ಆದರೆ ಆ ವ್ಯಕ್ತಿಗೆ ತಮ್ಮ ಮೇಲೆ ಯಾವುದೇ ಅಸಮಾಧಾನವಿರಲಿಲ್ಲ. ಬದಲಾಗಿ, ಅಂದು ತಾವು ತೋರಿದ ವೃತ್ತಿಪರತೆ ಮತ್ತು ಉದ್ಯೋಗದಿಂದ ತೆಗೆದುಹಾಕುವ ಸಂದರ್ಭದಲ್ಲಿ ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಇದೀಗ ತನಗೆ ಕೆಲಸದ ಆಫರ್ ನೀಡಿದ್ದು, ಈಗಿನ ವೇತನಕ್ಕಿಂತ ಶೇ.20ರಷ್ಟು ಹೆಚ್ಚು ಸಂಬಳ ಹಾಗೂ ಉತ್ತಮ ಕೆಲಸದ ಸಮಯದ ಭರವಸೆಯನ್ನೂ ನೀಡಿದ್ದಾರೆ.
ಕೆಲಸ ಒಪ್ಪಿಕೊಳ್ಳಬೇಕಾ? ಎಂಬ ಗೊಂದಲ
ಈ ಆಫರ್ ಖುಷಿ ತಂದಿದ್ದರೂ, ಅದನ್ನು ಒಪ್ಪಿಕೊಳ್ಳುವ ಬಗ್ಗೆ ವ್ಯಕ್ತಿಗೆ ಗೊಂದಲ ಶುರುವಾಗಿದೆ. ಹಳೆಯ ಘಟನೆ ಮತ್ತೆ ಮುಜುಗರದ ಪರಿಸ್ಥಿತಿ ಸೃಷ್ಟಿಸಬಹುದೇ? ಅಥವಾ ಮಾಜಿ ಉದ್ಯೋಗಿ ಆ ಘಟನೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆಯೇ ಎಂಬ ಆತಂಕ ಕಾಡುತ್ತಿದೆ. ಈ ವಿಚಾರವನ್ನು ಪತ್ನಿಯೊಂದಿಗೆ ಹಂಚಿಕೊಂಡಾಗ, ಆಕೆ ಮಾತ್ರ ಈ ಗೊಂದಲವನ್ನು ನೋಡಿ ‘ಹುಚ್ಚ’ ಎಂದು ಹೇಳಿದ್ದಾರಂತೆ.
ರೆಡ್ಡಿಟ್ನಲ್ಲಿ ಪರ-ವಿರೋಧ ಚರ್ಚೆ
ಈ ಪೋಸ್ಟ್ಗೆ ಹಲವರು ಪ್ರತಿಕ್ರಿಯಿಸಿದ್ದಾರೆ. ಒಬ್ಬ ಬಳಕೆದಾರರು, “ಆ ವ್ಯಕ್ತಿಯ ನಡವಳಿಕೆಯ ಬಗ್ಗೆ ನಿಮಗೆ ನಂಬಿಕೆಯಿದ್ದರೆ ಉದ್ಯೋಗದ ಆಫರ್ ಒಪ್ಪಿಕೊಳ್ಳಿ” ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, “ನಿಮ್ಮ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ಇಷ್ಟು ಸಮಯ ಕಾಯುತ್ತಿರಲಿಲ್ಲ. ಪ್ರಬುದ್ಧತೆಯಿಂದ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ” ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ, ಹಳೆಯ ಉದ್ಯೋಗ ಸಂಬಂಧದ ಘಟನೆ ಇದೀಗ ಹೊಸ ಉದ್ಯೋಗಾವಕಾಶಕ್ಕೆ ಕಾರಣವಾಗಿದ್ದು, ಈ ಆಫರ್ ಸ್ವೀಕರಿಸಬೇಕೇ ಬೇಡವೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.



One thought on “ಎರಡು ವರ್ಷಗಳ ಹಿಂದೆ ಕೆಲಸದಿಂದ ವಜಾ ಮಾಡಿದ್ದ ಬಾಸ್ಗೆ ಉದ್ಯೋಗದ ಆಫರ್ ಕೊಟ್ಟ ಮಾಜಿ ಉದ್ಯೋಗಿ”