Viral Video: ರೀಲ್ಸ್ಗಾಗಿ ಅಪಾಯಕಾರಿ ಸಾಹಸ ಮಾಡಲು ಹೋಗಿ 38 ವರ್ಷದ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಪಹುಜ್ ಡ್ಯಾಂನಲ್ಲಿ ನಡೆದ ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಾನುವಾರ ಪುಷ್ಪೇಂದ್ರ ಎಂಬ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಶೂಟ್ ಮಾಡಲು ಪಹುಜ್ ಡ್ಯಾಂಗೆ ತೆರಳಿದ್ದ. ವಿಭಿನ್ನ ದೃಶ್ಯ ಸೆರೆಹಿಡಿಯುವ ಉದ್ದೇಶದಿಂದ ಡ್ಯಾಂನ ವೀಕ್ಷಣಾ ಸ್ಥಳದ ರೈಲಿಂಗ್ ದಾಟಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾನೆ.
ಆದರೆ ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ, ನೀರಿಗೆ ಬೀಳುವ ಬದಲು ಕೆಳಗಿದ್ದ ಬಂಡೆಗಳ ಮೇಲೆ ಬಿದ್ದಿದ್ದಾನೆ. ಪರಿಣಾಮ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿ ಮೂಳೆಗಳು ಮುರಿದಿವೆ.
ಕಾಲುಗಳಿಗೆ ಗಾಯವಾಗಿದ್ದರಿಂದ ನೀರಿನಿಂದ ಹೊರಬರಲು ಸಾಧ್ಯವಾಗದೆ ಪುಷ್ಪೇಂದ್ರ ಮುಳುಗುವ ಅಪಾಯಕ್ಕೂ ಸಿಲುಕಿದ್ದ. ಈ ವೇಳೆ ಸ್ಥಳದಲ್ಲಿದ್ದ ಕೆಲವರು ತಕ್ಷಣ ನೆರವಿಗೆ ಧಾವಿಸಿ ಆತನನ್ನು ನೀರಿನಿಂದ ಹೊರಗೆಳೆದು ರಕ್ಷಿಸಿದ್ದಾರೆ.
ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗಾಯಾಳುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಎರಡೂ ಕಾಲುಗಳ ಮೂಳೆ ಮುರಿದಿರುವುದು ದೃಢಪಟ್ಟಿದೆ. ಒಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಮೆಟಲ್ ರಾಡ್ ಅಳವಡಿಸಲಾಗಿದ್ದು, ಮತ್ತೊಂದು ಕಾಲಿನ ಶಸ್ತ್ರಚಿಕಿತ್ಸೆ ಬಾಕಿಯಿದೆ ಎಂದು ತಿಳಿದುಬಂದಿದೆ.
ಪುಷ್ಪೇಂದ್ರ ಡ್ಯಾಂಗೆ ಜಿಗಿಯುತ್ತಿದ್ದ ದೃಶ್ಯವನ್ನು ಆತನ ಸ್ನೇಹಿತರು ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿದ್ದರು. ವೀಡಿಯೋದಲ್ಲಿ ಜಿಗಿಯುವ ಮುನ್ನ ಸ್ನೇಹಿತರೊಬ್ಬರು ತಮಾಷೆಯಾಗಿ “ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಹೇಳಿರುವುದು ಕೂಡ ಕೇಳಿಬರುತ್ತದೆ.
ಈ ಘಟನೆ ಮತ್ತೊಮ್ಮೆ ರೀಲ್ಸ್ಗಾಗಿ ಅಪಾಯಕಾರಿ ಸಾಹಸಗಳನ್ನು ಮಾಡುವುದರಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಎಚ್ಚರಿಕೆ ಮೂಡಿಸಿದೆ.