ರಷ್ಯಾ ಪೊಲೀಸರ ವಶದಲ್ಲಿ ದೆಹಲಿ ಟೆಕ್ಕಿ; 10 ವರ್ಷದ ಮಗುವಿನೊಂದಿಗೆ ಪತ್ನಿ ಕಂಗಾಲು

ಮಾಸ್ಕೋ: ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದ ದೆಹಲಿಯ ಟೆಕ್ಕಿಯೊಬ್ಬರನ್ನು ಮಾಸ್ಕೋ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪತಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುವಂತೆ ಅವರ ಪತ್ನಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಟೆಕ್ಕಿ ಚಂದನ್ ಗುಪ್ತಾ ಅವರ ಪತ್ನಿ ಸ್ನೇಹ ಗುಪ್ತಾ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಪತಿಯ ಪರಿಸ್ಥಿತಿ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಸ್ನೇಹ ಗುಪ್ತಾ, “ನನ್ನ ಪತಿ ನೋಯ್ಡಾದ ಸೆಕ್ಟರ್ 62ರಲ್ಲಿರುವ ಭಾರತೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಎಂಜಿನಿಯರ್ ಆಗಿದ್ದು, ಕಂಪನಿಯ ಕೆಲಸಕ್ಕಾಗಿ ರಷ್ಯಾಗೆ ತೆರಳಿದ್ದಾರೆ. ಹೈಕ್ವಾಲಿಫೈಡ್ ವೀಸಾ ಪಡೆದು ನಾವು ರಷ್ಯಾದಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದ್ದಾರೆ.

“ರಾತ್ರಿ ಸುಮಾರು 12:30ಕ್ಕೆ ಇಲ್ಲಿನ ಪೊಲೀಸರು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದಾರೆ. ಅವರು ಯಾವುದೇ ತಪ್ಪು ಮಾಡಿಲ್ಲ. ಆದರೂ ಪೊಲೀಸರು ಅವರನ್ನು ಕರೆದುಕೊಂಡು ಹೋಗಿ ಕಿರುಕುಳ ನೀಡುತ್ತಿದ್ದಾರೆ. ಅವರನ್ನು ಬಿಡುಗಡೆ ಮಾಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.

ರಷ್ಯಾದ ಸ್ಥಳೀಯ ಭಾಷೆ ತಿಳಿದಿಲ್ಲದ ಕಾರಣ ತಮಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿರುವ ಸ್ನೇಹ, ತಮ್ಮ 10 ವರ್ಷದ ಮಗುವಿನೊಂದಿಗೆ ತಾವು ಒಂಟಿಯಾಗಿರುವುದಾಗಿ ತಿಳಿಸಿದ್ದಾರೆ.

“ನನಗೆ ಮಾಸ್ಕೋದ ಸ್ಥಳೀಯ ಭಾಷೆ ಬರುವುದಿಲ್ಲ. ನಾನು ನನ್ನ 10 ವರ್ಷದ ಮಗುವಿನೊಂದಿಗೆ ಇಲ್ಲಿ ಒಂಟಿಯಾಗಿದ್ದೇನೆ. ದಯವಿಟ್ಟು ನಮಗೆ ಸಹಾಯ ಮಾಡಿ” ಎಂದು ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *