ನಟ ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ವಿಚ್ಛೇದನಕ್ಕೆ ನ್ಯಾಯಾಲಯ ಅಂತಿಮ ಮುದ್ರೆ ಒತ್ತಿದೆ. ಡಿವೋರ್ಸ್ ಬಳಿಕ ದುನಿಯಾ ವಿಜಯ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ನಾಗರತ್ನ ಕೂಡ ಮೊದಲ ಬಾರಿಗೆ ಸುದೀರ್ಘ ಬರಹದ ಮೂಲಕ ಪ್ರತಿಕ್ರಿಯಿಸಿದ್ದಾರೆ.
ನಾಗರತ್ನ ಅವರು ತಮ್ಮ ಮದುವೆ ಜೀವನದಲ್ಲಿ ಅನುಭವಿಸಿದ ನೋವು ಹಾಗೂ ಹಲವು ವರ್ಷಗಳ ಹೋರಾಟದ ಬಗ್ಗೆ ಬರೆದುಕೊಂಡಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಇಷ್ಟು ವರ್ಷ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಮದುವೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ವಿಚ್ಛೇದನವನ್ನು ವಿರೋಧಿಸುತ್ತಲೇ ಬಂದಿದ್ದೆ. ಆದರೆ ಇದೀಗ ನ್ಯಾಯಾಲಯ ವಿಚ್ಛೇದನವನ್ನು ಮಂಜೂರು ಮಾಡಿದೆ ಎಂದು ತಿಳಿಸಿದ್ದಾರೆ.
‘ನಾನು ಅನುಭವಿಸಿದ ನೋವು ನನಗೆ ಮಾತ್ರ ಗೊತ್ತು’
ತಮ್ಮ ಬರಹದಲ್ಲಿ ನಾಗರತ್ನ ಅವರು ‘Narcissistic abuse’ ಅನುಭವಿಸಿದ್ದಾಗಿ ಹೇಳಿದ್ದಾರೆ. ಹೊರಗಿನಿಂದ ಯಾರಿಗೂ ಕಾಣದಂತಹ ಆಳವಾದ ಮಾನಸಿಕ ಮತ್ತು ಭಾವನಾತ್ಮಕ ನೋವನ್ನು ಒಳಗೇ ಇಟ್ಟುಕೊಂಡು ಬದುಕುವುದು ಹೇಗಿರುತ್ತದೆ ಎಂಬುದು ನನಗೆ ಮಾತ್ರ ಗೊತ್ತು ಎಂದು ಬರೆದುಕೊಂಡಿದ್ದಾರೆ.
ಮದುವೆಯ ಹೊರಗಿನ ಸಂಬಂಧಕ್ಕೆ ಸಂಬಂಧಿಸಿದಂತೆ ಕೂಡ ನಾಗರತ್ನ ಅವರು ತಮ್ಮ ಬರಹದಲ್ಲಿ ಆರೋಪ ಮಾಡಿದ್ದಾರೆ. ಆದರೆ ಈ ಕುರಿತು ಸರಿಯಾದ ಸಮಯದಲ್ಲಿ ಇನ್ನಷ್ಟು ವಿಷಯಗಳನ್ನು ತಮ್ಮದೇ ಮಾತುಗಳಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ.

‘ಯಾರ ಮೇಲೂ ಆರೋಪ ಮಾಡುವುದು ನನ್ನ ಉದ್ದೇಶವಲ್ಲ’
ತಾವು ಅನುಭವಿಸಿದ ಸಂಗತಿಗಳನ್ನು ಒಂದು ದಿನ ಖಂಡಿತವಾಗಿಯೂ ಹಂಚಿಕೊಳ್ಳಲು ಬಯಸುತ್ತೇನೆ. ಆದರೆ ಯಾರ ಮೇಲೂ ಆರೋಪ ಮಾಡುವ ಉದ್ದೇಶವಿಲ್ಲ. ಇಂತಹ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮಹಿಳೆಯರಿಗೆ ತಾವು ಒಂಟಿಯಲ್ಲ ಎಂಬ ಅರಿವು ಮೂಡಿಸುವುದೇ ನನ್ನ ಉದ್ದೇಶ ಎಂದು ನಾಗರತ್ನ ಹೇಳಿದ್ದಾರೆ.
ಸದ್ಯ ತಮ್ಮ ವೈಯಕ್ತಿಕ ನೋವಿಗಿಂತ ಮಕ್ಕಳ ಭವಿಷ್ಯವೇ ಮೊದಲ ಆದ್ಯತೆ. ಮಕ್ಕಳ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತಿರುವ ಸಂದರ್ಭದಲ್ಲಿ ತಮ್ಮ ವೈಯಕ್ತಿಕ ವಿಚಾರಗಳು ಅದರ ಮೇಲೆ ಪರಿಣಾಮ ಬೀರುವುದು ಇಷ್ಟವಿಲ್ಲ. ಹೀಗಾಗಿ ಸದ್ಯಕ್ಕೆ ಮೌನವಾಗಿರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
‘ನನ್ನ ಮಕ್ಕಳು ನನ್ನ ಶಕ್ತಿ’
ನನ್ನ ಮೂವರು ಮಕ್ಕಳು ಯಾವಾಗಲೂ ನನ್ನ ಶಕ್ತಿಯಾಗಿ ನನ್ನೊಂದಿಗೆ ನಿಂತಿದ್ದಾರೆ. ಅವರ ಮೇಲೆ ನಿಮ್ಮೆಲ್ಲರ ಆಶೀರ್ವಾದ ಇದ್ದರೆ ನನಗೆ ಅಷ್ಟೇ ಸಾಕು ಎಂದು ನಾಗರತ್ನ ಹೇಳಿದ್ದಾರೆ.
ಅದೇ ವೇಳೆ, “ವಿಜಯ್ ಕುಮಾರ್ ಅವರು ತಮ್ಮ ಜೀವನದಲ್ಲಿ ಸಂತೋಷವಾಗಿರಲಿ ಎಂದು ಹಾರೈಸುತ್ತೇನೆ. ಉಳಿದದ್ದನ್ನು ಕಾಲಕ್ಕೂ ಕರ್ಮಕ್ಕೂ ಬಿಡುತ್ತೇನೆ” ಎಂದು ತಮ್ಮ ಬರಹವನ್ನು ಮುಗಿಸಿದ್ದಾರೆ.
ನಾಗರತ್ನ ಅವರ ಈ ಪೋಸ್ಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು, ಅವರು ಮುಂದೆ ಯಾವ ವಿಚಾರಗಳನ್ನು ಬಹಿರಂಗಪಡಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.