Dean Elgar: ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌

Dean Elgar: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಅನುಭವಿ ಆರಂಭಿಕ ಬ್ಯಾಟರ್ ಡೀನ್ ಎಲ್ಗರ್ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 39 ವರ್ಷದ ಎಲ್ಗರ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಪ್ರಕಟಿಸಿದ್ದು, ಇನ್ನು ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುವುದಾಗಿ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪರ 12 ವರ್ಷಗಳ ಕಾಲ ಆಡಿರುವ ಎಲ್ಗರ್, 2024ರಲ್ಲಿ ಕೇಪ್‌ಟೌನ್‌ನಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಆ ಬಳಿಕ ದೇಶೀಯ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡುತ್ತಿದ್ದರು. ಇದೀಗ ಅಲ್ಲಿಗೂ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ವಿಶ್ವಾಸಾರ್ಹ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದ ಎಲ್ಗರ್ 86 ಟೆಸ್ಟ್ ಪಂದ್ಯಗಳಿಂದ 5,347 ರನ್ ಗಳಿಸಿದ್ದಾರೆ. 37.92ರ ಸರಾಸರಿಯಲ್ಲಿ ಬ್ಯಾಟ್‌ ಬೀಸಿರುವ ಅವರು 14 ಶತಕ ಹಾಗೂ ಹಲವು ಪ್ರಮುಖ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಬಾಂಗ್ಲಾದೇಶ ವಿರುದ್ಧ 199 ರನ್ ಗಳಿಸಿದ್ದು ಅವರ ಟೆಸ್ಟ್‌ ವೃತ್ತಿಜೀವನದ ಗರಿಷ್ಠ ವೈಯಕ್ತಿಕ ಸ್ಕೋರ್.

ನಾಯಕನಾಗಿಯೂ ಎಲ್ಗರ್ ದಕ್ಷಿಣ ಆಫ್ರಿಕಾ ತಂಡಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ನಾಯಕತ್ವದಲ್ಲಿ ಲಾರ್ಡ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದು, ತಮ್ಮ ವೃತ್ತಿಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದು ಎಂದು ಎಲ್ಗರ್ ಹೇಳಿದ್ದಾರೆ.

ನಿವೃತ್ತಿ ಕುರಿತು ಮಾತನಾಡಿರುವ ಎಲ್ಗರ್, 39ರ ಹರೆಯದಲ್ಲಿ ನಿವೃತ್ತಿಗೆ ಇದು ಸರಿಯಾದ ಸಮಯ ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ. ಇನ್ನು ಪತ್ನಿ ಹಾಗೂ ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುವುದಾಗಿ ಹೇಳಿದ್ದಾರೆ.

12 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದು ಹೇಳಿರುವ ಎಲ್ಗರ್, ದಕ್ಷಿಣ ಆಫ್ರಿಕಾ ತಂಡದ ನಾಯಕತ್ವ ವಹಿಸಿಕೊಂಡಿದ್ದು ತಮ್ಮ ಕ್ರಿಕೆಟ್ ಜೀವನದ ಹೆಮ್ಮೆಯ ಕ್ಷಣಗಳಲ್ಲಿ ಒಂದು ಎಂದು ಸ್ಮರಿಸಿದ್ದಾರೆ.

Leave a Reply

Your email address will not be published. Required fields are marked *