ಭಾರತದ ‘ಮೊದಲ ಗ್ರಾಮ’ ಯಾವುದು ಗೊತ್ತಾ? ಈ ಊರಿನ ಕಥೆ ಕೇಳಿದ್ರೆ ಅಚ್ಚರಿ ಆಗುತ್ತೆ

ಭಾರತದಲ್ಲಿ ಪ್ರವಾಸಕ್ಕೆ ಹೋಗುವವರಿಗೆ ನಿಸರ್ಗ, ಬೆಟ್ಟ, ಪುರಾಣ ಮತ್ತು ಇತಿಹಾಸ ಎಲ್ಲವನ್ನೂ ಒಂದೇ ಕಡೆ ನೋಡಬೇಕು ಅಂದ್ರೆ ಉತ್ತರಾಖಂಡದ ಈ ಗ್ರಾಮ ವಿಶೇಷ. ಹಿಮಾಲಯದ ಮಡಿಲಲ್ಲಿರುವ ಮಾನಾ ಗ್ರಾಮ ಈಗ ‘ಭಾರತದ ಮೊದಲ ಗ್ರಾಮ’ ಎಂಬ ಹೆಗ್ಗಳಿಕೆಯಿಂದ ಪ್ರವಾಸಿಗರ ಗಮನ ಸೆಳೆಯುತ್ತಿದೆ.

ಬದರಿನಾಥ ಧಾಮದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಮಾನಾ ಗ್ರಾಮ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿದೆ. ಭಾರತ-ಟಿಬೆಟ್ ಗಡಿಯ ಸಮೀಪದಲ್ಲಿರುವ ಈ ಊರನ್ನು ಹಿಂದೆ ‘ಭಾರತದ ಕೊನೆಯ ಗ್ರಾಮ’ ಎಂದು ಕರೆಯಲಾಗುತ್ತಿತ್ತು. ಆದರೆ ಈಗ ‘ಭಾರತದ ಮೊದಲ ಗ್ರಾಮ’ ಎಂದು ಗುರುತಿಸಲಾಗಿದೆ.

‘ಕೊನೆಯ ಗ್ರಾಮ’ದಿಂದ ‘ಮೊದಲ ಗ್ರಾಮ’ಕ್ಕೆ
2022ರ ಅಕ್ಟೋಬರ್ 21ರಂದು ಪ್ರಧಾನಿ ನರೇಂದ್ರ ಮೋದಿ ಮಾನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗಡಿ ಗ್ರಾಮಗಳನ್ನು ದೇಶದ ‘ಕೊನೆಯ ಗ್ರಾಮ’ ಎಂದು ನೋಡಬಾರದು. ಬದಲಾಗಿ ದೇಶ ಆರಂಭವಾಗುವ ‘ಮೊದಲ ಗ್ರಾಮ’ ಎಂದು ನೋಡಬೇಕು ಎಂದು ಹೇಳಿದ್ದರು. ಇದಾದ ಬಳಿಕ ಗಡಿ ರಸ್ತೆಗಳ ಸಂಸ್ಥೆ (BRO) ಇಲ್ಲಿ ‘First Indian Village – Mana’ ಎಂಬ ಫಲಕವನ್ನು ಅಳವಡಿಸಿತು. ಇದರಿಂದ ಮಾನಾ ಗ್ರಾಮಕ್ಕೆ ದೇಶಾದ್ಯಂತ ಮತ್ತಷ್ಟು ಗುರುತು ಸಿಕ್ಕಿತು.

ಮಹಾಭಾರತದ ಜೊತೆಗೂ ಇದೆ ನಂಟು
ಮಾನಾ ಗ್ರಾಮಕ್ಕೆ ಪೌರಾಣಿಕ ಹಿನ್ನೆಲೆಯೂ ಇದೆ. ಪಾಂಡವರು ಸ್ವರ್ಗಾರೋಹಣದ ಪ್ರಯಾಣದಲ್ಲಿ ಈ ಪ್ರದೇಶದ ಮೂಲಕ ಹಾದುಹೋಗಿದ್ದರು ಎಂಬ ಸ್ಥಳೀಯ ನಂಬಿಕೆ ಇದೆ.

ಇಲ್ಲಿನ ಭೀಮ್ ಪುಲ್ ಕೂಡ ಪ್ರವಾಸಿಗರ ಪ್ರಮುಖ ಆಕರ್ಷಣೆ. ಸರಸ್ವತಿ ನದಿಯ ಮೇಲೆ ಬೃಹತ್ ಬಂಡೆ ಇರುವ ಈ ಸ್ಥಳದ ಬಗ್ಗೆ, ದ್ರೌಪದಿ ನದಿಯನ್ನು ದಾಟಲು ಭೀಮನೇ ಬಂಡೆಯನ್ನು ಇಟ್ಟಿದ್ದ ಎಂಬ ಪೌರಾಣಿಕ ಕಥೆ ಇದೆ. ಇದರ ಜೊತೆಗೆ ವ್ಯಾಸ ಗುಹೆ ಮತ್ತು ಗಣೇಶ ಗುಹೆ ಕೂಡ ಇಲ್ಲಿವೆ. ಈ ಸ್ಥಳಗಳು ಮಹಾಭಾರತ ಮತ್ತು ಪುರಾಣಗಳೊಂದಿಗೆ ಸಂಬಂಧ ಹೊಂದಿವೆ ಎಂಬ ನಂಬಿಕೆಯಿದೆ.

ಪ್ರಕೃತಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ
ಮಾನಾ ಗ್ರಾಮದ ಸುತ್ತಲೂ ಹಿಮಾಲಯದ ಅದ್ಭುತ ದೃಶ್ಯ ಕಾಣಸಿಗುತ್ತದೆ. ಹಿಮದಿಂದ ಆವೃತವಾದ ಪರ್ವತಗಳು, ತಂಪಾದ ವಾತಾವರಣ ಮತ್ತು ಶಾಂತ ಪರಿಸರ ಪ್ರವಾಸಿಗರನ್ನು ಸೆಳೆಯುತ್ತವೆ. ವಸುಧಾರ ಜಲಪಾತ, ಸರಸ್ವತಿ ನದಿ, ತಪ್ತ ಕುಂಡ ಸೇರಿದಂತೆ ಹಲವು ಸ್ಥಳಗಳು ಪ್ರವಾಸಿಗರಿಗೆ ವಿಶೇಷ ಅನುಭವ ನೀಡುತ್ತವೆ.

ಮಾನಾ ಗ್ರಾಮದಲ್ಲಿ ಮುಖ್ಯವಾಗಿ ಭೋಟಿಯಾ ಸಮುದಾಯದ ಜನರು ವಾಸಿಸುತ್ತಾರೆ. ಪ್ರವಾಸೋದ್ಯಮ, ಹೋಂಸ್ಟೇ, ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಸಾಂಪ್ರದಾಯಿಕ ಉತ್ಪನ್ನಗಳು ಇಲ್ಲಿನ ಜನರ ಜೀವನೋಪಾಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಒಟ್ಟಿನಲ್ಲಿ ಮಾನಾ ಗ್ರಾಮ ಕೇವಲ ಒಂದು ಪ್ರವಾಸಿ ತಾಣವಲ್ಲ. ಹಿಮಾಲಯದ ಸೌಂದರ್ಯ, ಪುರಾಣ, ಆಧ್ಯಾತ್ಮಿಕತೆ, ಗಡಿನಾಡಿನ ಜೀವನ ಮತ್ತು ಸ್ಥಳೀಯ ಸಂಸ್ಕೃತಿ ಎಲ್ಲವೂ ಒಂದೇ ಕಡೆ ಸಿಗುವ ವಿಶೇಷ ತಾಣ. ಬದರಿನಾಥಕ್ಕೆ ಹೋಗುವವರು ಈ ಊರಿಗೆ ಭೇಟಿ ನೀಡಿದರೆ ಯಾತ್ರೆಯ ಅನುಭವ ಇನ್ನಷ್ಟು ವಿಶೇಷವಾಗುತ್ತದೆ.

Leave a Reply

Your email address will not be published. Required fields are marked *