ʻನನ್ನ ಫೋನ್‌ನಲ್ಲೇ ಆರೋಪಗಳಿಗೆ ಸಾಕ್ಷ್ಯವಿದೆ; ಮೋದಿ ಫೋನ್ ಕದ್ದಾಲಿಕೆ ಮಾಡಿಸುತ್ತಿದ್ದಾರೆʼ: ರಾಹುಲ್ ಗಾಂಧಿ ಆರೋಪ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ತಾವು ಈ ಹಿಂದೆ ಮಾಡಿರುವ ಎಲ್ಲಾ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳು ತಮ್ಮ ಫೋನ್‌ನಲ್ಲಿವೆ ಎಂದು ಹೇಳಿರುವ ಅವರು, ಪ್ರಧಾನಿ ಮೋದಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಗೆ ಸವಾಲು ಹಾಕಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಂಧಿ, ತಮ್ಮ ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಮಾಹಿತಿಗಳು ಫೋನ್‌ನಲ್ಲಿವೆ ಎಂದು ಹೇಳಿದ್ದಾರೆ. ಪ್ರಧಾನಿ ಮೋದಿ ತಮ್ಮ ಫೋನ್ ಕದ್ದಾಲಿಕೆ ಮಾಡಿಸುತ್ತಿರುವುದರಿಂದ ಈ ವಿಚಾರ ಅವರಿಗೆ ತಿಳಿದಿದೆ ಎಂದೂ ಆರೋಪಿಸಿದ್ದಾರೆ.

ಪ್ರಧಾನಿ ಮೋದಿಗೆ ನೇರ ಚರ್ಚೆಯ ಸವಾಲು

“ನಾನು ಮಾಡಿರುವ ಎಲ್ಲಾ ಆರೋಪಗಳಿಗೆ ಪೂರಕ ಸಾಕ್ಷ್ಯಗಳು ಈ ಫೋನ್‌ನಲ್ಲೇ ಇವೆ. ಪ್ರಧಾನಿಯವರು ನನ್ನ ಫೋನ್ ಟ್ಯಾಪ್ ಮಾಡಿಸುವುದರಿಂದ ಅವರಿಗೆ ಈ ವಿಚಾರ ಗೊತ್ತಿದೆ. ಅವರು ನನ್ನೊಂದಿಗೆ ನೇರ ಚರ್ಚೆಗೆ ಬಂದರೆ, ಯಾರು ವಿದೇಶಿ ಶಕ್ತಿಗಳ ಕೈಗೊಂಬೆಯಾಗಿದ್ದಾರೆ? ಯಾರು ನಿಜವಾದ ದೇಶವಿರೋಧಿ? ಎಂಬ ಸತ್ಯ ಎಲ್ಲರಿಗೂ ತಿಳಿಯುತ್ತದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ದೀರ್ಘ ಭಾಷಣಗಳ ಬದಲಿಗೆ ನೇರವಾಗಿ ವಿಷಯಗಳ ಬಗ್ಗೆ ಚರ್ಚೆ ನಡೆಸೋಣ ಎಂದು ಪ್ರಧಾನಿ ಮೋದಿಗೆ ಸವಾಲು ಹಾಕಿದ್ದಾರೆ. ಇಂತಹ ಮುಖಾಮುಖಿ ಚರ್ಚೆ ನಡೆದರೆ ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯಲು ಸಾಧ್ಯವಾಗುವುದಿಲ್ಲ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದ ಆರೋಪ

ಇನ್‌ಸ್ಟಾಗ್ರಾಂನಲ್ಲಿ ನಡೆದ ‘ಆಸ್ಕ್ ಮಿ’ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿಯೂ ರಾಹುಲ್ ಗಾಂಧಿ ಈ ವಿಚಾರವಾಗಿ ಮಾತನಾಡಿದ್ದಾರೆ. ಬಿಜೆಪಿ ನಾಯಕರು ಸಂಸತ್ತಿನ ಚರ್ಚೆಯೇ ಸೂಕ್ತ ವೇದಿಕೆ ಎಂದು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಲೋಕಸಭೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ತಮ್ಮ ಮಾತಿನ ವೇಳೆ ಮೈಕ್ರೊಫೋನ್ ಸ್ಥಗಿತಗೊಳಿಸಲಾಗುತ್ತಿದೆ ಎಂದೂ ದೂರಿದ್ದಾರೆ.

ಕೃಷಿ ಕಾಯ್ದೆಗಳು, ಮತಗಳ್ಳತನದ ಆರೋಪ, ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR), ಚೀನಾ ವಿಚಾರ, ಜನರಲ್ ನರಾವಣೆ ಅವರ ಪುಸ್ತಕ ಹಾಗೂ ಎಪ್ಸ್ಟೀನ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅದಾನಿ, ಮೋಹನ್ ಭಾಗವತ್ ತೀರ್ಪುಗಾರರಾದರೂ ಒಪ್ಪಿಗೆ

ಪ್ರಧಾನಿ ಮೋದಿ ಮತ್ತು ತಾವು ಮುಖಾಮುಖಿಯಾಗಿ ಕುಳಿತು ಪರಸ್ಪರ ಆರೋಪಗಳ ಬಗ್ಗೆ ನೇರವಾಗಿ ಚರ್ಚೆ ನಡೆಸಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ಚರ್ಚೆಗೆ ತೀರ್ಪುಗಾರರನ್ನಾಗಿ ಉದ್ಯಮಿ ಗೌತಮ್ ಅದಾನಿ ಅಥವಾ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನೇಮಿಸಿದರೂ ತಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದಾರೆ.

ಈ ಹಿಂದೆ ಕೂಡ ರಾಹುಲ್ ಗಾಂಧಿ ಪ್ರಧಾನಿ ಮೋದಿಗೆ ಬಹಿರಂಗ ಚರ್ಚೆಯ ಸವಾಲು ಹಾಕಿದ್ದರು. ಆದರೆ, ಸಂಸತ್ತೇ ಚರ್ಚೆಗೆ ಸೂಕ್ತ ವೇದಿಕೆ ಎಂದು ಬಿಜೆಪಿ ನಾಯಕರು ಹೇಳಿದ್ದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ರಾಹುಲ್ ಗಾಂಧಿಗೆ ತಿರುಗೇಟು ನೀಡಿದ್ದರು.

Leave a Reply

Your email address will not be published. Required fields are marked *