ನವದೆಹಲಿ: ಕೇಂದ್ರ ವಿದೇಶಾಂಗ ಸಚಿವಾಲಯ (MEA) ಯುವಜನರಿಗೆ ಉತ್ತಮ ಅವಕಾಶವೊಂದನ್ನು ನೀಡಿದೆ. ಸಚಿವಾಲಯದ ಇಂಟರ್ನ್ಶಿಪ್ ಕಾರ್ಯಕ್ರಮಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ₹10,000 ಸ್ಟೈಫಂಡ್ ಸಿಗಲಿದೆ.
ಭಾರತದ ವಿದೇಶಾಂಗ ನೀತಿ, ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಸಚಿವಾಲಯದ ಕಾರ್ಯವೈಖರಿ ಬಗ್ಗೆ ಪ್ರಾಯೋಗಿಕ ಅನುಭವ ಪಡೆಯಲು ಈ ಇಂಟರ್ನ್ಶಿಪ್ ಸಹಾಯ ಮಾಡಲಿದೆ. ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 27, 2026ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಇಂಟರ್ನ್ಶಿಪ್ ಎಷ್ಟು ದಿನ?
ವಿದೇಶಾಂಗ ಸಚಿವಾಲಯವು ವರ್ಷದಲ್ಲಿ ಎರಡು ಹಂತಗಳಲ್ಲಿ ಈ ಇಂಟರ್ನ್ಶಿಪ್ ನಡೆಸುತ್ತದೆ. ಮೊದಲ ಹಂತ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ ಹಾಗೂ ಎರಡನೇ ಹಂತ ಅಕ್ಟೋಬರ್ನಿಂದ ಮಾರ್ಚ್ವರೆಗೆ ನಡೆಯಲಿದೆ.
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕನಿಷ್ಠ 1 ತಿಂಗಳು ಮತ್ತು ಗರಿಷ್ಠ 3 ತಿಂಗಳ ಇಂಟರ್ನ್ಶಿಪ್ ಅವಕಾಶ ಸಿಗಲಿದೆ.
ತಿಂಗಳಿಗೆ ₹10,000 ಸ್ಟೈಫಂಡ್
ಇಂಟರ್ನ್ಶಿಪ್ಗೆ ಆಯ್ಕೆಯಾದವರಿಗೆ ಪ್ರತಿ ತಿಂಗಳು ₹10,000 ಸ್ಟೈಫಂಡ್ ನೀಡಲಾಗುತ್ತದೆ.
ಇದರ ಜೊತೆಗೆ ಅಭ್ಯರ್ಥಿಯ ರಾಜ್ಯದ ರಾಜಧಾನಿಯಿಂದ ದೆಹಲಿಗೆ ತೆರಳಲು ಬೇಕಾಗುವ ವಿಮಾನ ಪ್ರಯಾಣ ವೆಚ್ಚವನ್ನು ನಿಗದಿತ ಮಿತಿಯೊಳಗೆ ಸಚಿವಾಲಯ ಭರಿಸಲಿದೆ.
ಆದರೆ ದೆಹಲಿಯಲ್ಲಿ ತಂಗಲು ಬೇಕಾದ ವಸತಿ ಮತ್ತು ಊಟದ ಖರ್ಚನ್ನು ಅಭ್ಯರ್ಥಿಗಳೇ ನೋಡಿಕೊಳ್ಳಬೇಕು.
ಯಾರು ಅರ್ಜಿ ಸಲ್ಲಿಸಬಹುದು?
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರುವ ಭಾರತೀಯ ನಾಗರಿಕರು ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಅವಕಾಶವಿದೆ.
ಇಂಟರ್ನ್ಶಿಪ್ ಪೂರ್ಣಗೊಳ್ಳುವ ವರ್ಷದ ಡಿಸೆಂಬರ್ 31ರಂದು ಅಭ್ಯರ್ಥಿಯ ವಯಸ್ಸು 25 ವರ್ಷ ಮೀರಿರಬಾರದು ಎಂಬ ನಿಯಮವಿದೆ.
30 ಅಭ್ಯರ್ಥಿಗಳಿಗೆ ಅವಕಾಶ
ಪ್ರತಿ ಹಂತದಲ್ಲೂ ಗರಿಷ್ಠ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಇದ್ದು, ಹಿಂದುಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೂ ವಿಶೇಷ ಅವಕಾಶ ನೀಡಲಾಗಿದೆ. ಒಟ್ಟು ಸ್ಥಾನಗಳಲ್ಲಿ ಕನಿಷ್ಠ 30% ಮಹಿಳೆಯರಿಗೆ ಮೀಸಲಿಡಲಾಗಿದೆ.
ಆಯ್ಕೆ ಹೇಗೆ ನಡೆಯಲಿದೆ?
ಅಭ್ಯರ್ಥಿಗಳ ಆಯ್ಕೆ ಎರಡು ಪ್ರಮುಖ ಹಂತಗಳಲ್ಲಿ ನಡೆಯಲಿದೆ.
ಮೊದಲಿಗೆ ಅರ್ಜಿಗಳ ಪ್ರಾಥಮಿಕ ಸ್ಕ್ರೀನಿಂಗ್ ಮಾಡಲಾಗುತ್ತದೆ. ನಂತರ ಶಾರ್ಟ್ಲಿಸ್ಟ್ ಆಗುವ ಅಭ್ಯರ್ಥಿಗಳಿಗೆ ಆನ್ಲೈನ್ ವೀಡಿಯೊ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಲಾಗುತ್ತದೆ.
ಪಿಯುಸಿ ಮತ್ತು ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ರಾಜ್ಯವಾರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಮೆರಿಟ್ ಪಟ್ಟಿ ಸಿದ್ಧಪಡಿಸುವ ವ್ಯವಸ್ಥೆಯೂ ಇದೆ.
ಪ್ರಾಥಮಿಕ ಸ್ಕ್ರೀನಿಂಗ್ನಲ್ಲಿ TADP ಜಿಲ್ಲೆಗಳ ಅಭ್ಯರ್ಥಿಗಳಿಗೆ ಹಾಗೂ ಸಂದರ್ಶನದ ಹಂತದಲ್ಲಿ SC, ST, OBC ಮತ್ತು EWS ವರ್ಗಗಳ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 27, 2026
- ಸಂದರ್ಶನಕ್ಕೆ ಆಯ್ಕೆಯಾದವರ ಪಟ್ಟಿ: ಅಕ್ಟೋಬರ್ 7, 2026
- ಆನ್ಲೈನ್ ಸಂದರ್ಶನ: ಅಕ್ಟೋಬರ್ 17, 2026
- ಅಂತಿಮ ಆಯ್ಕೆ ಪಟ್ಟಿ: ಅಕ್ಟೋಬರ್ 23, 2026
ಅರ್ಜಿ ಸಲ್ಲಿಸುವುದು ಹೇಗೆ?
ಇಂಟರ್ನ್ಶಿಪ್ಗೆ ನೋಂದಣಿ, ಅರ್ಜಿ ಸಲ್ಲಿಕೆ, ಸ್ಕ್ರೀನಿಂಗ್ ಹಾಗೂ ವಿಭಾಗೀಯ ಹಂಚಿಕೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳು ವಿದೇಶಾಂಗ ಸಚಿವಾಲಯದ ಅಧಿಕೃತ ಇಂಟರ್ನ್ಶಿಪ್ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನಡೆಯಲಿದೆ.
ವಿದೇಶಾಂಗ ನೀತಿ, ಅಂತರರಾಷ್ಟ್ರೀಯ ಸಂಬಂಧಗಳು ಹಾಗೂ ಸಾರ್ವಜನಿಕ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿರುವ ಅರ್ಹ ಯುವಜನರು ಮೊದಲು ಪೋರ್ಟಲ್ನಲ್ಲಿ ನೋಂದಣಿ ಮಾಡಿಕೊಂಡು, ಸೆಪ್ಟೆಂಬರ್ 27ರೊಳಗೆ ಅರ್ಜಿಯನ್ನು ಪೂರ್ಣಗೊಳಿಸಬೇಕು.
ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆ, ದಾಖಲೆಗಳು, ಆಯ್ಕೆ ನಿಯಮಗಳು ಮತ್ತು ಇತರ ಷರತ್ತುಗಳನ್ನು ಒಮ್ಮೆ ಪರಿಶೀಲಿಸುವುದು ಉತ್ತಮ.