ಉಗುರು ಕತ್ತರಿಸುವುದಕ್ಕೂ ದಿನ ನೋಡಬೇಕಾ? ಹೌದು ಅಂತಾರೆ ಜ್ಯೋತಿಷ್ಯ ನಂಬಿಕೆಗಳು. ವಾರದ ಕೆಲವು ದಿನಗಳಲ್ಲಿ ಉಗುರು ಕತ್ತರಿಸುವುದು ಶುಭ, ಇನ್ನು ಕೆಲವು ದಿನಗಳಲ್ಲಿ ಕತ್ತರಿಸುವುದು ಅಶುಭ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಹಾಗಾದ್ರೆ ಯಾವ ದಿನ ಉಗುರು ಕತ್ತರಿಸಬೇಕು? ಯಾವ ದಿನ ಕತ್ತರಿಸಬಾರದು? ಇಲ್ಲಿದೆ ಮಾಹಿತಿ.
ಹಿಂದೂ ಸಂಪ್ರದಾಯದಲ್ಲಿ ಉಗುರು ಕತ್ತರಿಸುವ ವಿಚಾರಕ್ಕೂ ಕೆಲವು ನಿಯಮಗಳನ್ನು ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಜ್ಯೋತಿಷ್ಯ ನಂಬಿಕೆಯ ಪ್ರಕಾರ, ಪ್ರತಿಯೊಂದು ದಿನವೂ ಒಂದೊಂದು ಗ್ರಹದ ಪ್ರಭಾವಕ್ಕೆ ಒಳಪಟ್ಟಿರುತ್ತದೆ. ಹೀಗಾಗಿ ನಿರ್ದಿಷ್ಟ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಗ್ರಹಗಳ ಸಕಾರಾತ್ಮಕ ಶಕ್ತಿ ಕಡಿಮೆಯಾಗಬಹುದು ಎಂಬ ನಂಬಿಕೆ ಇದೆ.
ಮಂಗಳವಾರ ಉಗುರು ಕತ್ತರಿಸಬೇಡಿ
ಮಂಗಳವಾರದ ಅಧಿಪತಿ ಮಂಗಳ ಗ್ರಹ. ಈ ದಿನ ಉಗುರು ಕತ್ತರಿಸುವುದು ಆರೋಗ್ಯ ಸಮಸ್ಯೆ, ಸಾಲದ ಬಾಧೆ, ಅನಗತ್ಯ ಜಗಳ ಹಾಗೂ ಕೋಪ ಹೆಚ್ಚಾಗಲು ಕಾರಣವಾಗಬಹುದು ಎಂಬ ನಂಬಿಕೆ ಇದೆ.
ಗುರುವಾರವೂ ಅಶುಭ ಎನ್ನಲಾಗುತ್ತದೆ
ಗುರುವಾರ ಗುರು ಗ್ರಹದ ದಿನ. ಈ ದಿನ ಶ್ರೀಮನ್ನಾರಾಯಣ ಹಾಗೂ ಲಕ್ಷ್ಮಿ ದೇವಿಗೆ ವಿಶೇಷವಾದ ದಿನ ಎಂದು ನಂಬಲಾಗುತ್ತದೆ. ಗುರುವಾರ ಉಗುರು ಕತ್ತರಿಸಿದರೆ ಮನೆಯ ಸಂಪತ್ತು ಕಡಿಮೆಯಾಗಬಹುದು, ಆರ್ಥಿಕ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ. ವಿದ್ಯಾರ್ಥಿಗಳ ಏಕಾಗ್ರತೆಗೂ ತೊಂದರೆಯಾಗಬಹುದು ಎನ್ನಲಾಗುತ್ತದೆ.
ಶನಿವಾರ ಉಗುರು ಕತ್ತರಿಸಿದರೆ ಶನಿ ದೋಷ?
ಶನಿವಾರ ಶನಿದೇವನ ದಿನ. ಈ ದಿನ ಉಗುರು ಕತ್ತರಿಸುವುದು ಅಶುಭ ಎಂದು ಹಿಂದಿನಿಂದಲೂ ನಂಬಲಾಗಿದೆ. ಶನಿ ದೋಷ, ಜೀವನದಲ್ಲಿ ಅಡೆತಡೆ, ಮಾನಸಿಕ ನೆಮ್ಮದಿ ಕೊರತೆ ಹಾಗೂ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ತಕ್ಕ ಫಲ ಸಿಗದಿರುವಂತಹ ಸಮಸ್ಯೆಗಳು ಎದುರಾಗಬಹುದು ಎಂಬ ನಂಬಿಕೆ ಇದೆ.
ಭಾನುವಾರ ಕೂಡ ಬೇಡ!
ಭಾನುವಾರ ಸೂರ್ಯ ದೇವನ ದಿನ. ಸಾಮಾನ್ಯವಾಗಿ ರಜೆ ಇರುವ ಕಾರಣ ಹಲವರು ಈ ದಿನ ಉಗುರು ಕತ್ತರಿಸುತ್ತಾರೆ. ಆದರೆ ಜ್ಯೋತಿಷ್ಯ ನಂಬಿಕೆಯ ಪ್ರಕಾರ ಭಾನುವಾರ ಉಗುರು ಕತ್ತರಿಸುವುದು ಸೂರ್ಯನ ಸಕಾರಾತ್ಮಕ ಶಕ್ತಿಗೆ ಧಕ್ಕೆ ತರಬಹುದು. ಇದರಿಂದ ಗೌರವ, ಪ್ರತಿಷ್ಠೆ ಮತ್ತು ವೃತ್ತಿಜೀವನದಲ್ಲಿ ನಷ್ಟ ಉಂಟಾಗಬಹುದು ಎಂದು ಹೇಳಲಾಗುತ್ತದೆ.
ಅಮಾವಾಸ್ಯೆಯಂದು ಮಾತ್ರ ಉಗುರು ಕತ್ತರಿಸಬೇಡಿ!
ವಾರದ ಯಾವುದೇ ದಿನವಾಗಿದ್ದರೂ ಅಮಾವಾಸ್ಯೆಯಂದು ಉಗುರು ಕತ್ತರಿಸಬಾರದು ಎಂಬ ನಂಬಿಕೆ ಇದೆ. ಈ ದಿನ ನಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಿರುತ್ತದೆ ಎಂದು ನಂಬಲಾಗುತ್ತದೆ. ಅಮಾವಾಸ್ಯೆಯಂದು ಉಗುರು ಕತ್ತರಿಸಿದರೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ತೊಂದರೆಯಾಗಬಹುದು ಎನ್ನಲಾಗುತ್ತದೆ.
ಹಾಗಾದ್ರೆ ಯಾವ ದಿನ ಉಗುರು ಕತ್ತರಿಸಬೇಕು?
ಜ್ಯೋತಿಷಿ ಪ್ರಶಾಂತ್ ಅವರ ಹೇಳಿಕೆಯಂತೆ, ಸೋಮವಾರ, ಬುಧವಾರ ಮತ್ತು ಶುಕ್ರವಾರ ಉಗುರು ಕತ್ತರಿಸಲು ಶುಭ ದಿನಗಳು ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಉಗುರು ಕತ್ತರಿಸುವುದರಿಂದ ಶುಭ ಫಲ, ನೆಮ್ಮದಿ ಮತ್ತು ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ.
ಗಮನಿಸಿ: ಇವು ಜ್ಯೋತಿಷ್ಯ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಆಧಾರದ ಮೇಲಿನ ವಿಚಾರಗಳು. ವೈಜ್ಞಾನಿಕವಾಗಿ ಉಗುರು ಕತ್ತರಿಸುವ ದಿನ ಮತ್ತು ಅದೃಷ್ಟ ಅಥವಾ ಆರ್ಥಿಕ ಸ್ಥಿತಿಯ ನಡುವೆ ಸಂಬಂಧ ಸಾಬೀತಾಗಿಲ್ಲ.