ಕರ್ನಾಟಕದಲ್ಲಿ 1 ವರ್ಷ ಗುಟ್ಕಾ, ಪಾನ್ ಮಸಾಲಾ ಬ್ಯಾನ್; ಮಾರಾಟ ಮಾಡಿದ್ರೆ ಕಾನೂನು ಕ್ರಮ!

ಬೆಂಗಳೂರು: ಗುಟ್ಕಾ ಹಾಗೂ ಪಾನ್ ಮಸಾಲಾ ಬಳಸುವವರಿಗೆ ಕರ್ನಾಟಕ ಸರ್ಕಾರ ಶಾಕ್ ನೀಡಿದೆ. ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಶೇಖರಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ರಾಜ್ಯಾದ್ಯಂತ ಒಂದು ವರ್ಷದ ಅವಧಿಗೆ ನಿಷೇಧಿಸಲಾಗಿದೆ.

ರಾಜ್ಯ ಆಹಾರ ಸುರಕ್ಷತಾ ಆಯುಕ್ತರು ಈ ಬಗ್ಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಧಿಸೂಚನೆ ಹೊರಡಿಸಿದ ದಿನದಿಂದಲೇ ನಿಷೇಧ ಜಾರಿಗೆ ಬಂದಿದೆ.

ಅಂದರೆ, ಇನ್ಮುಂದೆ ಅಂಗಡಿಗಳಲ್ಲಿ ತಂಬಾಕು ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಮಾರಾಟ ಮಾಡುವುದು ಸುಲಭದ ಮಾತಲ್ಲ. ಪ್ಯಾಕೆಟ್, ಸ್ಯಾಚೆಟ್ ಅಥವಾ ಬೇರೆ ಯಾವುದೇ ಹೆಸರಿನಲ್ಲಿ ಮಾರಾಟ ಮಾಡಿದರೂ ನಿಷೇಧ ಅನ್ವಯವಾಗಲಿದೆ.

ಇದರಲ್ಲಿ ಮತ್ತೊಂದು ಮುಖ್ಯ ವಿಚಾರ ಇದೆ. ತಂಬಾಕು ಅಥವಾ ನಿಕೋಟಿನ್ ಅನ್ನು ಪ್ರತ್ಯೇಕವಾಗಿ ಪ್ಯಾಕ್ ಮಾಡಿ, ಗ್ರಾಹಕರು ನಂತರ ಅದನ್ನು ಮಿಶ್ರಣ ಮಾಡಿಕೊಂಡು ಬಳಸುವ ರೀತಿಯ ಉತ್ಪನ್ನಗಳಿಗೂ ಈ ನಿಯಮ ಅನ್ವಯವಾಗಲಿದೆ.

ಹೀಗಾಗಿ, ತಂಬಾಕು-ನಿಕೋಟಿನ್ ಮಿಶ್ರಿತ ಗುಟ್ಕಾ ಮತ್ತು ಪಾನ್ ಮಸಾಲಾಗಳನ್ನು ಮಾರಾಟ ಮಾಡುವುದು, ಸಾಗಿಸುವುದು, ಸಂಗ್ರಹಿಸುವುದು ಅಥವಾ ವಿತರಿಸುವುದು ಶಿಕ್ಷಾರ್ಹ ಅಪರಾಧವಾಗಲಿದೆ.

ಸಾರ್ವಜನಿಕ ಆರೋಗ್ಯದ ಮೇಲೆ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಒಂದು ವರ್ಷದ ಅವಧಿಗೆ ಜಾರಿಯಾಗಿರುವ ಈ ನಿಷೇಧದಿಂದ ಗುಟ್ಕಾ ಮತ್ತು ಪಾನ್ ಮಸಾಲಾ ಮಾರಾಟ ಮಾಡುವ ಅಂಗಡಿಗಳ ಮೇಲೂ ನಿಗಾ ಹೆಚ್ಚಾಗುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *