ನವದೆಹಲಿ: ಇನ್ಮುಂದೆ ಮನೆಯಲ್ಲಿ ಯಾವ ಸಮಯದಲ್ಲಿ ವಿದ್ಯುತ್ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ಕರೆಂಟ್ ಬಿಲ್ ಬದಲಾಗುವ ಸಾಧ್ಯತೆಯಿದೆ. ವಿದ್ಯುತ್ ಬಳಕೆಗೆ ಒಂದೇ ರೀತಿಯ ದರ ವಿಧಿಸುವ ಬದಲು, ದಿನದ ಬೇರೆ ಬೇರೆ ಸಮಯಕ್ಕೆ ಬೇರೆ ಬೇರೆ ಶುಲ್ಕ ನಿಗದಿಪಡಿಸುವ ಹೊಸ ನಿಯಮ ಜಾರಿಗೆ ತರಲು ಕೇಂದ್ರ ವಿದ್ಯುತ್ ಸಚಿವಾಲಯ ಮುಂದಾಗಿದೆ.
ಇದಕ್ಕಾಗಿ ‘ಟೈಮ್ ಆಫ್ ದಿ ಡೇ’ (Time of the Day – ToD) ಎಂಬ ಹೊಸ ದರ ಪದ್ಧತಿಯನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ. ಈ ನಿಯಮದ ಪ್ರಕಾರ, ದಿನದ ಯಾವ ಸಮಯದಲ್ಲಿ ವಿದ್ಯುತ್ ಬಳಸುತ್ತೀರಿ ಎಂಬುದರ ಆಧಾರದ ಮೇಲೆ ನಿಮ್ಮ ವಿದ್ಯುತ್ ಬಿಲ್ ನಿರ್ಧಾರವಾಗಲಿದೆ.
ಯಾವ ಸಮಯಕ್ಕೆ ಹೆಚ್ಚು ಬಿಲ್ ಬರಬಹುದು?
ಸಾಮಾನ್ಯವಾಗಿ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ವಿದ್ಯುತ್ ಬಳಕೆ ಹೆಚ್ಚಿರುತ್ತದೆ. ಮನೆಗಳಲ್ಲಿ ಲೈಟ್, ಫ್ಯಾನ್, ಟಿವಿ, ವಾಷಿಂಗ್ ಮಷಿನ್ ಸೇರಿದಂತೆ ಹಲವು ಉಪಕರಣಗಳು ಇದೇ ಸಮಯದಲ್ಲಿ ಹೆಚ್ಚು ಬಳಕೆಯಾಗುತ್ತವೆ. ಹೀಗಾಗಿ ವಿದ್ಯುತ್ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಹೆಚ್ಚು ಶುಲ್ಕ ವಿಧಿಸುವ ಸಾಧ್ಯತೆಯಿದೆ.
ಇನ್ನು ರಾತ್ರಿ ಅಥವಾ ವಿದ್ಯುತ್ ಬೇಡಿಕೆ ಕಡಿಮೆ ಇರುವ ಸಮಯದಲ್ಲಿ ವಿದ್ಯುತ್ ಬಳಸಿದರೆ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಅಂದರೆ, ವಿದ್ಯುತ್ ಬಳಕೆಯ ಸಮಯವನ್ನು ಬದಲಾಯಿಸುವ ಮೂಲಕ ಗ್ರಾಹಕರು ತಮ್ಮ ಬಿಲ್ ಕಡಿಮೆ ಮಾಡಿಕೊಳ್ಳಲು ಅವಕಾಶ ಸಿಗಲಿದೆ.
ಯಾವಾಗ ಜಾರಿಗೆ ಬರಲಿದೆ ಹೊಸ ನಿಯಮ?
ಈ ಸಂಬಂಧ ಕೇಂದ್ರ ಸರ್ಕಾರ ಕರಡು ನಿಯಮಾವಳಿಯನ್ನು ಸಿದ್ಧಪಡಿಸಿದೆ. ಪ್ರಸ್ತಾವಿತ ವೇಳಾಪಟ್ಟಿಯ ಪ್ರಕಾರ, 2027ರ ಏಪ್ರಿಲ್ 1ರಿಂದ ಹೊಸ ದರ ಪದ್ಧತಿ ಜಾರಿಗೆ ಬರಲಿದೆ.
ಮೊದಲ ಹಂತದಲ್ಲಿ 10 ಕಿಲೋವ್ಯಾಟ್ಗಿಂತ ಹೆಚ್ಚು ಗರಿಷ್ಠ ವಿದ್ಯುತ್ ಬೇಡಿಕೆ ಹೊಂದಿರುವ ಗ್ರಾಹಕರನ್ನು ಈ ನಿಯಮದಡಿ ತರಲು ಉದ್ದೇಶಿಸಲಾಗಿದೆ. 2028ರ ಏಪ್ರಿಲ್ 1ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಗುರಿಯಿದೆ.
ಇನ್ನು ಇತರೆ ಗ್ರಾಹಕರನ್ನು 2029ರ ಏಪ್ರಿಲ್ 1ರೊಳಗೆ ಹೊಸ ದರ ಪದ್ಧತಿಯ ವ್ಯಾಪ್ತಿಗೆ ತರಲು ಯೋಜಿಸಲಾಗಿದೆ.
ಕೃಷಿಕರಿಗೆ ಈ ನಿಯಮ ಅನ್ವಯವಾಗುವುದಿಲ್ಲ!
ಈ ಹೊಸ ದರ ಪದ್ಧತಿಯಿಂದ ಕೃಷಿಕ ಗ್ರಾಹಕರಿಗೆ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ. ಇನ್ನು ಯಾವ ಸಮಯಕ್ಕೆ ಎಷ್ಟು ವಿದ್ಯುತ್ ಶುಲ್ಕ ವಿಧಿಸಬೇಕು ಎಂಬುದನ್ನು ನಿರ್ಧರಿಸುವ ಜವಾಬ್ದಾರಿಯನ್ನು ರಾಜ್ಯಗಳ ವಿದ್ಯುತ್ ನಿಯಂತ್ರಣ ಆಯೋಗಗಳಿಗೆ ನೀಡಲಾಗಿದೆ.
ಒಟ್ಟಿನಲ್ಲಿ, ಹೊಸ ನಿಯಮ ಜಾರಿಗೆ ಬಂದರೆ ವಿದ್ಯುತ್ ಬಳಸುವ ಸಮಯದ ಬಗ್ಗೆಯೂ ಗ್ರಾಹಕರು ಗಮನ ಹರಿಸಬೇಕಾಗಬಹುದು. ವಿಶೇಷವಾಗಿ ವಿದ್ಯುತ್ ಬೇಡಿಕೆ ಹೆಚ್ಚಿರುವ ಸಮಯದಲ್ಲಿ ಬಳಕೆಯನ್ನು ಕಡಿಮೆ ಮಾಡಿ, ಕಡಿಮೆ ಬೇಡಿಕೆಯ ಸಮಯದಲ್ಲಿ ಹೆಚ್ಚು ವಿದ್ಯುತ್ ಬಳಸುವ ಮೂಲಕ ಬಿಲ್ ಉಳಿತಾಯ ಮಾಡಲು ಅವಕಾಶ ಸಿಗಬಹುದು.


