ಬಿಗ್ ಬಾಸ್ ವೇದಿಕೆಯಲ್ಲಿ ರಶ್ಮಿಕಾಗೆ ಸರ್ಪ್ರೈಸ್; ಕನ್ನಡದಲ್ಲೇ ಮಾತನಾಡಿದ ಮುಖೇಶ್ ಗೌಡ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ತಮ್ಮ ಸಿನಿಮಾಗಳ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದರ ನಡುವೆ ‘ಬಿಗ್ ಬಾಸ್ ತೆಲುಗು 10’ ವೇದಿಕೆಯಲ್ಲಿ ನಡೆದ ಒಂದು ಸುಂದರ ಕ್ಷಣ ಅಭಿಮಾನಿಗಳ ಗಮನ ಸೆಳೆದಿದೆ. ತೆಲುಗು ಧಾರಾವಾಹಿಗಳ ಮೂಲಕ ಜನಪ್ರಿಯತೆ ಪಡೆದಿರುವ ನಟ ಹಾಗೂ ಬಿಗ್ ಬಾಸ್ ಸ್ಪರ್ಧಿ ಮುಖೇಶ್ ಗೌಡ, ರಶ್ಮಿಕಾ ಅವರೊಂದಿಗೆ ಕನ್ನಡದಲ್ಲೇ ಮಾತನಾಡಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ನಾಗಾರ್ಜುನ ನಿರೂಪಣೆ ಮಾಡುತ್ತಿರುವ ‘ಬಿಗ್ ಬಾಸ್ ತೆಲುಗು 10’ ಶೋನ ವಾರಾಂತ್ಯದ ಸಂಚಿಕೆಗೆ ರಶ್ಮಿಕಾ ಅತಿಥಿಯಾಗಿ ಆಗಮಿಸಿದ್ದರು. ತಮ್ಮ ಮುಂಬರುವ ‘ಮೈಸಾ’ ಸಿನಿಮಾದ ಪ್ರಚಾರಕ್ಕಾಗಿ ಅವರು ಬಿಗ್ ಬಾಸ್ ವೇದಿಕೆಗೆ ಬಂದಿದ್ದರು. ಈ ವೇಳೆ ಮನೆಯ ಸ್ಪರ್ಧಿಗಳನ್ನು ಪರಿಚಯಿಸುವಾಗ ಮುಖೇಶ್ ಗೌಡ ಅವರು ರಶ್ಮಿಕಾಗೆ ಪರಿಚಯವಾದರು.

ವಿಶೇಷ ಅಂದ್ರೆ, ಮುಖೇಶ್ ಅವರು ತಾವು ರಶ್ಮಿಕಾ ಅವರ ಕಾಲೇಜು ಸೀನಿಯರ್ ಎಂದು ಹೇಳಿ ನಟಿಗೆ ಅಚ್ಚರಿ ಮೂಡಿಸಿದರು. ಭಾನುವಾರದ (ನವೆಂಬರ್ 22) ಸಂಚಿಕೆಯಲ್ಲಿ ನಾಗಾರ್ಜುನ ಅವರು ಮುಖೇಶ್ ಅವರನ್ನು ಉದ್ದೇಶಿಸಿ, ‘ರಶ್ಮಿಕಾ ಇಲ್ಲಿದ್ದಾರೆ. ನಿಮ್ಮ ಮೈಸೂರು ಕನ್ನಡ ಅಥವಾ ಬೆಂಗಳೂರು ಕನ್ನಡದಲ್ಲಿ ಅವರೊಂದಿಗೆ ಮಾತನಾಡಿ’ ಎಂದು ಹೇಳಿದರು.

ತಕ್ಷಣವೇ ಕನ್ನಡದಲ್ಲಿ ಮಾತನಾಡಲು ಶುರು ಮಾಡಿದ ಮುಖೇಶ್, ‘ನೀವು ಕಾಲೇಜಿನಲ್ಲಿ ನನಗೆ ಜೂನಿಯರ್ ಆಗಿದ್ದಿರಿ’ ಎಂದರು. ಇದನ್ನು ಕೇಳಿದ ರಶ್ಮಿಕಾ ಒಂದು ಕ್ಷಣ ಅಚ್ಚರಿಗೊಂಡರು. ಬಳಿಕ ಮುಖೇಶ್, ‘ನನ್ನ ಸ್ನೇಹಿತರು ನಿಮ್ಮೊಂದಿಗೆ ಓದುತ್ತಿದ್ದರು. ನಾನು ನಿಮ್ಮನ್ನು ಕಾಲೇಜಿನಲ್ಲಿ ನೋಡಿದ್ದೆ’ ಎಂದು ಹಳೆಯ ನೆನಪುಗಳನ್ನು ಹಂಚಿಕೊಂಡರು.

ಇದಕ್ಕೆ ಖುಷಿಯಿಂದ ಪ್ರತಿಕ್ರಿಯಿಸಿದ ರಶ್ಮಿಕಾ, ‘ನಿಮ್ಮನ್ನು ಭೇಟಿಯಾಗಿದ್ದು ತುಂಬಾ ಖುಷಿಯಾಯಿತು’ ಎಂದು ಹೇಳಿ ಶುಭ ಹಾರೈಸಿದರು. ಅಷ್ಟೇ ಅಲ್ಲ, ಮುಖೇಶ್ ಅವರು ರಶ್ಮಿಕಾ ನಟನೆಯ ‘ದಿ ಗರ್ಲ್‌ಫ್ರೆಂಡ್’ ಸಿನಿಮಾ ತಮಗೆ ತುಂಬಾ ಇಷ್ಟವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಶ್ಮಿಕಾ, ‘ನೀವು ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನನ್ನ ಮೈಸಾ ಸಿನಿಮಾ ನೋಡಿ. ಇದರಲ್ಲಿ ನಾನು ಆ್ಯಕ್ಷನ್ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದೇನೆ’ ಎಂದು ಹೇಳಿದರು. ಹೀಗೆ ಇಬ್ಬರೂ ಕನ್ನಡದಲ್ಲೇ ಮಾತನಾಡಿದ್ದು ವೇದಿಕೆಯಲ್ಲಿದ್ದವರ ಗಮನ ಸೆಳೆಯಿತು.

ಈ ಮುದ್ದಾದ ಸಂಭಾಷಣೆಯ ವಿಡಿಯೋವನ್ನು ಮುಖೇಶ್ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಾಲೇಜಿನ ದಿನಗಳ ಪರಿಚಯ ಬಿಗ್ ಬಾಸ್ ವೇದಿಕೆಯಲ್ಲಿ ಮತ್ತೆ ನೆನಪಾದ ಕ್ಷಣವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಅದರಲ್ಲೂ ತೆಲುಗು ಶೋನಲ್ಲಿ ಇಬ್ಬರು ಕನ್ನಡದಲ್ಲಿ ಮಾತನಾಡಿರುವುದು ಕನ್ನಡಿಗರಿಗೂ ಖುಷಿ ತಂದಿದೆ.

Leave a Reply

Your email address will not be published. Required fields are marked *