ಜಯಲಲಿತಾ ಹಾದಿಯಲ್ಲಿ ತ್ರಿಷಾ? ನಟಿಗೆ ಹೊಸ ಬಿರುದು ನೀಡಿದ ಅಭಿಮಾನಿಗಳು!

ನಟಿ ತ್ರಿಷಾ ಕೃಷ್ಣನ್ (Trisha Krishnan) ಸದ್ಯ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಹೊಸ ಸಿನಿಮಾ ಅಲ್ಲ, ಅಭಿಮಾನಿಗಳು ನೀಡಿರುವ ಹೊಸ ಬಿರುದು! ಹೌದು, ತಮಿಳುನಾಡಿನಲ್ಲಿ ತ್ರಿಷಾ ಅಭಿಮಾನಿಗಳು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ನೀಡಿದ್ದ ಬಿರುದಿನಿಂದ ಸ್ಫೂರ್ತಿ ಪಡೆದು ನಟಿಗೆ ಹೊಸ ಬಿರುದು ನೀಡಿದ್ದಾರೆ. ಇದರ ಬೆನ್ನಲ್ಲೇ ತ್ರಿಷಾ ರಾಜಕೀಯಕ್ಕೆ ಬರುತ್ತಾರಾ ಎಂಬ ಚರ್ಚೆಯೂ ಶುರುವಾಗಿದೆ.

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ತ್ರಿಷಾ ಅಭಿಮಾನಿಗಳು ‘ಇಲೈಯಾ ಪುರಚ್ಚಿ ತಲೈವಿ ತ್ರಿಶಾ ಪೆರವೈ’ (ಯುವ ಕ್ರಾಂತಿಕಾರಿ ನಾಯಕಿ ತ್ರಿಷಾ ವೇದಿಕೆ) ಎಂಬ ಹೆಸರಿನಲ್ಲಿ ಹೊಸ ಸಂಘಟನೆಯನ್ನು ಆರಂಭಿಸಿದ್ದಾರೆ. ಈ ಹೆಸರಿನಲ್ಲಿ ‘ಇಲೈಯಾ’ ಎಂದರೆ ಯುವ ಎಂಬ ಅರ್ಥವಿದೆ. ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅಭಿಮಾನಿಗಳು ‘ಪುರಚ್ಚಿ ತಲೈವಿ’ ಎಂದು ಕರೆಯುತ್ತಿದ್ದರು. ಈಗ ಅದೇ ಹೆಸರಿಗೆ ‘ಯುವ’ ಎಂಬ ಪದ ಸೇರಿಸಿ ತ್ರಿಷಾಗೆ ಹೊಸ ಬಿರುದು ನೀಡಿರುವುದು ಕುತೂಹಲ ಮೂಡಿಸಿದೆ.

ಈ ಬಗ್ಗೆ ಮಾತನಾಡಿರುವ ಸಂಘಟನೆಯ ಸಂಯೋಜಕ ರಾಜಗೋಪಾಲ್, ತ್ರಿಷಾ ಅವರು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಜೊತೆ ಸೇರಿ ರಾಜಕೀಯಕ್ಕೆ ಬಂದರೆ ಜನರಿಗೆ ಒಳ್ಳೆಯದಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಈ ಸಂಘಟನೆ ಆರಂಭಿಸಲು ತ್ರಿಷಾ ಅವರ ಒಪ್ಪಿಗೆ ಇದೆಯೇ? ಅಥವಾ ಅಭಿಮಾನಿಗಳೇ ಸ್ವಂತವಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಇನ್ನು ತ್ರಿಷಾ ಅವರಿಗೆ ರಾಜಕೀಯದ ಬಗ್ಗೆ ಆಸಕ್ತಿ ಇದೆಯೇ ಎಂಬ ಪ್ರಶ್ನೆಯೂ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಸದ್ಯಕ್ಕೆ ನಟಿ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಹೀಗಾಗಿ ಅಭಿಮಾನಿಗಳ ಈ ನಡೆ ರಾಜಕೀಯ ಎಂಟ್ರಿಯ ಸುಳಿವೇ ಅಥವಾ ಅಭಿಮಾನದ ಅಭಿವ್ಯಕ್ತಿಯೇ ಎಂಬುದನ್ನು ಕಾದು ನೋಡಬೇಕಿದೆ.

ಸುಮಾರು 27 ವರ್ಷಗಳಿಂದ ಚಿತ್ರರಂಗದಲ್ಲಿರುವ ತ್ರಿಷಾ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಗಿಲ್ಲಿ’, ‘ವಿನ್ನೈತಾಂಡಿ ವರುವಾಯಾ’, ’96’, ‘ಪೊನ್ನಿಯಿನ್ ಸೆಲ್ವನ್’, ‘ಲಿಯೋ’ ಮತ್ತು ‘ಥಗ್ ಲೈಫ್’ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಸೂರ್ಯ ಜೊತೆಗಿನ ‘ಕರುಪ್ಪು’ ಸಿನಿಮಾದಿಂದಲೂ ಗಮನ ಸೆಳೆದಿದ್ದಾರೆ. ಸದ್ಯಕ್ಕೆ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತ್ರಿಷಾ, ರಾಜಕೀಯಕ್ಕೆ ಬರುತ್ತಾರಾ ಎಂಬ ಕುತೂಹಲ ಮಾತ್ರ ಹೆಚ್ಚಾಗಿದೆ.

Leave a Reply

Your email address will not be published. Required fields are marked *