4 ವರ್ಷಗಳಿಂದ ಮಗನ ಜೊತೆ ಮಾತಿಲ್ಲ; ಕ್ರಿಕೆಟರ್‌ ಭಾವುಕ – ಮತ್ತೆ ಮಗ ಜೀವನಕ್ಕೆ ಮರಳಲಿ ಎಂದು ಪ್ರಾರ್ಥನೆ!

ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಮಗ ಜೋರಾವರ್‌ನಿಂದ ಕಳೆದ ನಾಲ್ಕು ವರ್ಷಗಳಿಂದ ದೂರವಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಗನನ್ನು ನೆನಪಿಸಿಕೊಂಡು ಭಾವುಕರಾದ ಅವರು, ಒಂದು ದಿನ ಮಗ ಮತ್ತೆ ತಮ್ಮ ಜೀವನಕ್ಕೆ ಮರಳಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ‘ಕರ್ಲಿ ಟೇಲ್ಸ್’ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಶಿಖರ್ ಧವನ್, ಗುರುಗ್ರಾಮ್‌ನಲ್ಲಿರುವ ತಮ್ಮ ಮನೆಯನ್ನು ತೋರಿಸುವುದರ ಜೊತೆಗೆ ವೈಯಕ್ತಿಕ ಜೀವನದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪತ್ನಿ ಸೋಫಿ ಶೈನ್ ಜೊತೆಗಿನ ಮೊದಲ ಭೇಟಿಯಿಂದ ಹಿಡಿದು ವೈವಾಹಿಕ ಜೀವನ ಹಾಗೂ ಮಗ ಜೋರಾವರ್‌ನೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿದ್ದಾರೆ.

ಸೋಫಿ ಬಂದ ಬಳಿಕ ಜೀವನದಲ್ಲಿ ಬದಲಾವಣೆ

ಮಾಜಿ ಪತ್ನಿ ಆಯೇಷಾ ಮುಖರ್ಜಿಯಿಂದ ಬೇರ್ಪಟ್ಟ ಬಳಿಕ ಮೂರು-ನಾಲ್ಕು ವರ್ಷಗಳ ಕಾಲ ಒಂಟಿಯಾಗಿದ್ದೆ. ಆ ಸಮಯದಲ್ಲಿ ಜೀವನವನ್ನು ಆನಂದಿಸುತ್ತಿದ್ದೆ ಎಂದು ಶಿಖರ್ ಹೇಳಿದ್ದಾರೆ.

ಆದರೆ ಸೋಫಿ ತಮ್ಮ ಜೀವನಕ್ಕೆ ಬಂದ ಬಳಿಕ ಎಲ್ಲವೂ ಬದಲಾಗಿದೆ. ಜೀವನದಲ್ಲಿ ಸ್ಥಿರತೆ ಬಂದಿದೆ. ದಿನಚರಿ ಬದಲಾಗಿದ್ದು, ಈಗ ಹೆಚ್ಚು ಶಿಸ್ತುಬದ್ಧನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ದುಬೈನಲ್ಲಿ ಮೊದಲ ಭೇಟಿ

ಶಿಖರ್ ಮತ್ತು ಸೋಫಿ ಮೊದಲ ಬಾರಿಗೆ ದುಬೈನಲ್ಲಿ ಕೆಲವು ಸ್ನೇಹಿತರ ಮೂಲಕ ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲೇ ಶಿಖರ್ ಮೇಲೆ ಪ್ರೀತಿ ಮೂಡಿತ್ತು ಎಂದು ಸೋಫಿ ಹೇಳಿದ್ದಾರೆ.

ಆರಂಭದಲ್ಲಿ ಭಾರತಕ್ಕೆ ಬರುವ ಬಗ್ಗೆ ಸೋಫಿಗೆ ಸ್ವಲ್ಪ ಅನುಮಾನವಿತ್ತು. ಆದರೆ ಐಪಿಎಲ್ ಆರಂಭವಾದ ಬಳಿಕ ಶಿಖರ್‌ಗೆ ದೇಶದ ಹೊರಗೆ ಪ್ರಯಾಣಿಸಲು ಸಾಧ್ಯವಾಗದಿದ್ದಾಗ, ಸೋಫಿ ಒಬ್ಬರೇ ಭಾರತಕ್ಕೆ ಬರಲು ನಿರ್ಧರಿಸಿದ್ದರು.

ಶಿಖರ್ ಅವರನ್ನು ಮದುವೆಯಾಗುವ ಆಸೆಯನ್ನು ಸೋಫಿ ವ್ಯಕ್ತಪಡಿಸಿದ್ದರೂ, ಆರಂಭದಲ್ಲಿ ಶಿಖರ್ ಮದುವೆಗೆ ಸಿದ್ಧರಿರಲಿಲ್ಲ. ಮೊದಲ ಮದುವೆಯ ಬಳಿಕ ಮತ್ತೆ ಮದುವೆಯಾಗಬಾರದು ಎಂದು ನಿರ್ಧರಿಸಿದ್ದಾಗಿ ಅವರು ಸೋಫಿಗೆ ತಿಳಿಸಿದ್ದರಂತೆ. ಆದರೆ ಸೋಫಿ ಎಂದಿಗೂ ಮದುವೆಯಾಗುವಂತೆ ಒತ್ತಡ ಹೇರಲಿಲ್ಲ.

ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ಬಳಿಕ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡರು. ಬಳಿಕ ಫೆಬ್ರವರಿ 2026ರಲ್ಲಿ ವಿವಾಹವಾದರು.

ಮಗನ ನೆನಪಿಸಿಕೊಂಡು ಭಾವುಕರಾದ ಶಿಖರ್

ಸಂದರ್ಶನದಲ್ಲಿ ಮಗ ಜೋರಾವರ್ ಬಗ್ಗೆ ಮಾತನಾಡುವಾಗ ಶಿಖರ್ ಭಾವುಕರಾದರು. ಕಳೆದ ನಾಲ್ಕು ವರ್ಷಗಳಿಂದ ಮಗನೊಂದಿಗೆ ಮಾತನಾಡಿಲ್ಲ, ಯಾವುದೇ ಸಂಪರ್ಕವೂ ಇಲ್ಲ ಎಂದು ಅವರು ನೋವು ಹಂಚಿಕೊಂಡಿದ್ದಾರೆ.

“ನಾನು ಇನ್ನೂ ಅವನ ಬ್ಲಾಕ್ ಮಾಡಿದ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸುತ್ತೇನೆ. ಒಂದು ದಿನ ಅವನು ಮತ್ತೆ ನನ್ನ ಜೀವನಕ್ಕೆ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಕಳೆದ ನಾಲ್ಕು ವರ್ಷಗಳಿಂದ ನಾನು ಅವನೊಂದಿಗೆ ಮಾತನಾಡಿಲ್ಲ ಅಥವಾ ಯಾವುದೇ ಸಂಪರ್ಕ ಹೊಂದಿಲ್ಲ” ಎಂದು ಶಿಖರ್ ಹೇಳಿದ್ದಾರೆ.

ಮಗನೊಂದಿಗೆ ಮತ್ತೆ ಸಂಪರ್ಕ ಬೆಳೆಸುವ ನಿರೀಕ್ಷೆಯಲ್ಲಿರುವ ಶಿಖರ್ ಅವರ ಮಾತುಗಳು ಅಭಿಮಾನಿಗಳ ಮನಮುಟ್ಟಿವೆ.

Leave a Reply

Your email address will not be published. Required fields are marked *