ಆಹಾರ ಪದಾರ್ಥಗಳ ಬೆಲೆ ಏರಿಕೆ; ಇರುಳ್ಳಿ, ಬೆಳ್ಳುಳ್ಳಿ ಬೆಲೆ ಗಗನಕ್ಕೆ

ಆಹಾರ ಪದಾರ್ಥಗಳ ಬೆಲೆ ಏರಿಕೆಯ ಪರಿಣಾಮವಾಗಿ ದೇಶದ ಚಿಲ್ಲರೆ ಹಣದುಬ್ಬರ ಅಕ್ಟೋಬರ್ ತಿಂಗಳಲ್ಲಿ ಶೇ. 6.09ಕ್ಕೆ ಏರಿಕೆಯಾಗಿದೆ. ಈ ಮೂಲಕ 2024ರ ಅಕ್ಟೋಬರ್ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಗದಿಪಡಿಸಿರುವ ಶೇ. 6ರ ಗರಿಷ್ಠ ಮಿತಿಯನ್ನು ದಾಟಿದೆ.

ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಶೇ. 5.54ರಷ್ಟಿದ್ದ ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರ ಅಕ್ಟೋಬರ್‌ನಲ್ಲಿ ಗಣನೀಯ ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಆಹಾರ ಹಣದುಬ್ಬರ ದರವು ಶೇ. 7.74ರಿಂದ ಶೇ. 8.94ಕ್ಕೆ ಏರಿಕೆಯಾಗಿದೆ.

ಈ 5 ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ

ಅಕ್ಟೋಬರ್‌ನಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆ ಗ್ರಾಹಕರಿಗೆ ಹೆಚ್ಚಿನ ಹೊರೆ ತಂದಿದೆ. ಅತಿ ಹೆಚ್ಚು ಬೆಲೆ ಏರಿಕೆ ಕಂಡ ಐದು ವಸ್ತುಗಳ ವಿವರ ಇಲ್ಲಿದೆ.

  • ಈರುಳ್ಳಿ – ಶೇ. 116.22
  • ಬೆಳ್ಳುಳ್ಳಿ – ಶೇ. 60.74
  • ಬೆಳ್ಳಿ ಆಭರಣಗಳು – ಶೇ. 52.39
  • ಶುಂಠಿ – ಶೇ. 48.32
  • ನಿಂಬೆಹಣ್ಣು – ಶೇ. 47.30

ಹಣದುಬ್ಬರವನ್ನು ಶೇ. 2ರಿಂದ ಶೇ. 6ರ ವ್ಯಾಪ್ತಿಯಲ್ಲಿ ನಿಯಂತ್ರಿಸುವ ಹೊಣೆಗಾರಿಕೆಯನ್ನು ಆರ್‌ಬಿಐ ಹೊಂದಿದೆ. 2024ರ ಅಕ್ಟೋಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.25ರಷ್ಟಿತ್ತು. ಇದೀಗ ಮತ್ತೆ ಗರಿಷ್ಠ ಮಿತಿಯನ್ನು ದಾಟಿರುವುದು ಗಮನ ಸೆಳೆದಿದೆ.

ಆರ್‌ಬಿಐ ಬಡ್ಡಿದರ ಹೆಚ್ಚಿಸುವ ಸಾಧ್ಯತೆ ಇದೆಯೇ?

ಡಿಸೆಂಬರ್ 2ರಿಂದ 4ರವರೆಗೆ ನಡೆಯಲಿರುವ ಆರ್‌ಬಿಐ ಹಣಕಾಸು ನೀತಿ ಸಮಿತಿ (MPC) ಸಭೆಗೂ ಮುನ್ನ ಈ ಅಂಕಿಅಂಶಗಳು ಬಿಡುಗಡೆಯಾಗಿವೆ. ಏರುತ್ತಿರುವ ಹಣದುಬ್ಬರ, ರೂಪಾಯಿ ಮೌಲ್ಯ ಕುಸಿತ ಮತ್ತು ಕಚ್ಚಾ ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಆರ್‌ಬಿಐ ಮುಂದಿನ ಕ್ರಮದ ಬಗ್ಗೆ ಕುತೂಹಲ ಮೂಡಿದೆ.

ಕಳೆದ ಅಕ್ಟೋಬರ್‌ನಲ್ಲಿ ಆರ್‌ಬಿಐ ಸುಮಾರು ನಾಲ್ಕು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರವನ್ನು ಶೇ. 0.25ರಷ್ಟು ಹೆಚ್ಚಿಸಿ ಶೇ. 5.50ಕ್ಕೆ ನಿಗದಿಪಡಿಸಿತ್ತು. ಮುಂದಿನ ದಿನಗಳಲ್ಲಿ ಬಡ್ಡಿದರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯ ಸುಳಿವನ್ನೂ ಕೇಂದ್ರೀಯ ಬ್ಯಾಂಕ್ ನೀಡಿತ್ತು.

Leave a Reply

Your email address will not be published. Required fields are marked *